ಶಿವಮೊಗ್ಗ,ಸಾಹಿತ್ಯದಿಂದ ಸ್ನೇಹ, ಬಾಂಧವ್ಯ, ಮಿತ್ರತ್ವ, ಜನರ ವಿಶ್ವಾಸ ಸಿಗುತ್ತದೆ. ಬೇರಾವುದರಿಂದಲೂ ಇದು ಸಿಗಲು ಸಾಧ್ಯವಿಲ್ಲ. ಸಾಹಿತ್ಯದಿಂದ ಹೊಟ್ಟೆ ತುಂಬುತ್ತದೆಯೇ ಎಂದು ಪ್ರಶ್ನಿಸುವವರು ಇದನ್ನು ತಿಳಿದುಕೊಳ್ಳಬೇಕೆಂದು ಚುಟುಕು ಕವಿ ಡುಂಡಿರಾಜ್ ಅಭಿಪ್ರಾಯಪಟ್ಟರು.ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ದಸರಾ ಪ್ರಯುಕ್ತ ಸೋಮವಾರ ಸಂಜೆ ಜರುಗಿದ ಸಾಹಿತ್ಯ ದಸರಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಯುವಜನತೆ ಸಾಹಿತ್ಯದತ್ತ ಬರುತ್ತಿಲ್ಲ. ವಯಸ್ಸಾದವರು ಅಥವಾ ಸಾಹಿತ್ಯಾಸಕ್ತರು ಮಾತ್ರ ಬರುತ್ತಿದ್ದಾರೆ. ಯುವಜನತೆ ಮೊಬೈಲ್ ಮಹಿಮೆಗೆ ಸಿಲುಕಿದ್ದಾರೆ. ಮೊಬೈ ನಿಂದ ಹೊರಬಂದು ನಮ್ಮ ಬುದ್ಧಿಯ ಹಸಿವನ್ನು ಹೆಚ್ಚಿಸಿಕೊಳ್ಳಬೇಕು. ಸಾಹಿತ್ಯ ಪ್ರೀತಿಯನ್ನು ಕೊಡುತ್ತದೆ. ಜೊತೆಗೆ ಹೊಟ್ಟೆ ಹಸಿವನ್ನು ಹೆಚ್ಚಿಸದಿದ್ದರೂ ಬೌದ್ಧಿಕ ಹಸಿವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಪುಸ್ತಕ ಓದುವ ಹವ್ಯಾಸ ಆರಂಭವಾಗುತ್ತದೆ. ಹೀಗೆ ಸಾಹಿತಿಯೇ ಆಗದಿದ್ದರೂ ತಾನು ಹವ್ಯಾಸದಿಂದಲೇ ಕವಿಯಾದೆ. ಇದು ಎಲ್ಲರಿಗೂ ಸಾಧ್ಯವಿದೆ ಎಂದರು.
ನಾಡಹಬ್ಬ ದಸರಾ ಕುರಿತು ಮಾತನಾಡಿದ ಅವರು, ದಸರಾ ಎಲ್ಲ ಹಬ್ಬಗಳಿಗಿಂತ ಮಹತ್ವವಾದುದು. ಪಿತೃಪಕ್ಷ ಮುಗಿದ ನಂತರ ಶುರುವಾದರೆ ೧೦ ದಿನಗಳ ಕಾಲ ವೈಭವಪೂರ್ಣ ಸಾಂಸ್ಕೃತಿಕ ಚಟುವಟಿಕೆ ನಾಡಿನಾದ್ಯಂತ ನಡೆಯುತ್ತದೆ. ಮನೆಯಲ್ಲಿ ದಸರಾ ಧಾರ್ಮಿಕವಾಗಿ ಆಚರಿಸಲ್ಪಟ್ಟರೆ, ಹೊರಗಡೆ ಸಾಂಸ್ಕೃತಿಕವಾಗಿ, ಮನರಂಜಕವಾಗಿ ಆಚರಣೆಯಾಗುತ್ತದೆ. ನಮ್ಮಲ್ಲಿ ಬದಲಾವಣೆ ತರುವ ಶಕ್ತಿ ಹಬ್ಬಕ್ಕಿದೆ ಎಂದರು.
ಶಿವಮೊಗ್ಗ ಸಾಹಿತ್ಯ, ಪ್ರಕೃತಿ ಮತ್ತು ಉಪಚಾರ ಮತ್ತು ಸಂಸ್ಕೃತಿಯಿಂದ ತುಂಬಿದೆ. ಇಂತಹ ಊರಿನಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಹೇರಳವಾಗಿದೆ. ಇದು ಮುಂದಿನ ಪೀಳಿಗೆಗೂ ಹಬ್ಬಬೇಕೆಂಬ ಆಶಯ ವ್ಯಕ್ತ್ತಪಡಿಸಿದರು.ಅಧ್ಯಕ್ಷತೆಯನ್ನು ಶಾಸಕ ಎಸ್ ಎನ್ ಚನ್ನಬಸಪ್ಪ ವಹಿಸಿದ್ದರು.
ಸಾಹಿತ್ಯ ದಸರಾ ಮುಖ್ಯಸ್ಥ ಎಂ ಎನ್ ಸುಂದರರಾಜು ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಕವಿಗಳಾದ ಕುಮಾರಸ್ವಾಮಿ, ಶ್ರೀನಿವಾಸಮೂರ್ತಿ ಮತ್ತು ಶುಭಾ ಕುಸ್ಕೂರು ಅವರ ಕವನ ಸಂಕಲನಗಳನ್ನು ಬಿಡುಗಡೆಗೊಳಿಸಲಾಯಿತು. ನಂತರ ಕವಿಗೋಷ್ಠಿ ಜರುಗಿತು.
