ಭದ್ರಾವತಿ | ಕೊಲೆ ಯತ್ನ ಪ್ರಕರಣದಲ್ಲಿ ಶಾಸಕ ಬಿ.ಕೆ. ಸಂಗಮೇಶ್ ಸೇರಿ ಐವರು ಖುಲಾಸೆ

ಕ್ರೈಂ

2010ರಲ್ಲಿ ಭದ್ರಾವತಿಯಲ್ಲಿ ನಡೆದಿದ್ದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ಕೋರ್ಟ್​ ಮಹತ್ವ ತೀರ್ಪನ್ನ ನೀಡಿದೆ. ಅಂದಿನ ಘಟನೆ ಕುರಿತಾಗಿ ದಾಖಲಾಗಿದ್ದ ಕೊಲೆ ಯತ್ನ ಕೇಸ್​ನಲ್ಲಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಸೇರಿದಂತೆ ಐವರು ಆರೋಪಿಗಳನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಬಿ. ಶಿವಪ್ರಸಾದ್ ಅವರು ನಿನ್ನೆ ದಿನ ಅಂದರೆ ಸೆಪ್ಟೆಂಬರ್ 22 ಮಂಗಳವಾರ ಪ್ರಕಟಿಸಿದ್ದಾರೆ. ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗದ ಹಿನ್ನೆಲೆಯಲ್ಲಿ ಎಲ್ಲ ಐವರನ್ನೂ ಖುಲಾಸೆಗೊಳಿಸಲಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಶಾಸಕ ಬಿ.ಕೆ. ಸಂಗಮೇಶ್, ಅವರ ಅಣ್ಣ ಬಿ.ಕೆ. ಮೋಹನ್, ತಮ್ಮ ಬಿ.ಕೆ. ಜಗದೀಶ್ ಹಾಗೂ ಸಂಗಮೇಶ್ ಅವರ ಮಕ್ಕಳಾದ ಗಣೇಶ ಮತ್ತು ಬಸವರಾಜ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಇವರ ಪರ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ವಿಚಾರಣೆ ವೇಳೆ ಸಲ್ಲಿಕೆಯಾದ ಸಾಕ್ಷ್ಯಾಧಾರಗಳು ಮತ್ತು ಆರೋಪಿಗಳ ಪರ ವಕೀಲರ ವಾದವನ್ನು ಪರಿಗಣಿಸಿದ ನ್ಯಾಯಾಲಯವು ಐವರನ್ನೂ ಆರೋಪಗಳಿಂದ ಮುಕ್ತಗೋಳಿಸಿದೆ.

ತನಿಖೆಯಲ್ಲಿನ ಲೋಪಗಳ ಪರಿಶೀಲನೆಗೆ ಸೂಚನೆ :

ಪ್ರಕರಣದ ತನಿಖೆಯಲ್ಲಿ ಲೋಪಗಳಾಗಿರುವ ಕುರಿತು ಆರೋಪಿಗಳ ಪರ ವಕೀಲರು ನ್ಯಾಯಾಲಯದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಯಲ್ಲಿ ಉಂಟಾಗಿರುವ ಲೋಪಗಳಿಗೆ ಜವಾಬ್ದಾರರಾಗಿರುವ ಅಧಿಕಾರಿಗಳನ್ನು ಗುರುತಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಖುಲಾಸೆ ತೀರ್ಪುಗಳ ಪರಿಶೀಲನಾ ಸಮಿತಿಗೆ (Acquittal Review Committee) ನ್ಯಾಯಾಲಯ ಸೂಚಿಸಿದೆ ಎಂದು ವರದಿಯಾಗಿದೆ. ಈ ಬಗ್ಗೆ , ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳಲ್ಲಿ ಕಂಡುಬಂದಿರುವ ವ್ಯತ್ಯಾಸಗಳು ಮತ್ತು ತನಿಖೆಯಲ್ಲಿನ ಲೋಪಗಳ ಕುರಿತು ಪರಿಶೀಲನೆ ನಡೆಸಿ, ಲೋಪ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಸಿ. ಮಹೇಶ್ ಕುಮಾರ್ , ಶಾಸಕರ ರಾಜಕೀಯ ಎದುರಾಳಿಯಾಗಿದ್ದು, ಉದ್ದೇಶಪೂರ್ವಕವಾಗಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಆರೋಪಿಗಳ ಪರ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಅಲ್ಲದೆ ಕೇಸ್​ ವಿಚಾರಣೆಯ ಸಂದರ್ಭದಲ್ಲಿ ಸುಳ್ಳು ಸಾಕ್ಷ್ಯ ನೀಡಲಾಗಿದೆ ಎಂಬ ವಾದವನ್ನೂ ಸಹ ಮುಂದಿಟ್ಟಿದ್ದರು.ಅಂದಿನ ಪ್ರಕರಣದ ಹಿನ್ನೆಲೆಭದ್ರಾವತಿ ನಗರದ ಹಳದಮ್ಮ ದೇವಿಯ ಜಾತ್ರೆಯ ಅಂಗವಾಗಿ 2010ರ ಮೇ 21ರಂದು ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯಾವಳಿಯ ಉದ್ಘಾಟನೆಯ ವಿಷಯದಲ್ಲಿ ಹೊಯ್​ ಕೈ ನಡೆದಿತ್ತು.

ಈ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ಬಿ.ಕೆ. ಸಂಗಮೇಶ್ ಹಾಗೂ ಅವರ ಬೆಂಬಲಿಗರು ಕಾರುಗಳಲ್ಲಿ ಬಂದು ತಮ್ಮ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದರು ಎಂದು ಸಿ. ಮಹೇಶ್ ಕುಮಾರ್ ಆರೋಪಿಸಿದ್ದರು.

ಮನೆಗೆ ನುಗ್ಗಿದ ಆರೋಪಿಗಳು ತಮ್ಮ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ತಮ್ಮ ಅಕ್ಕ ಜಯಮ್ಮ ಅವರ ಮೇಲೂ ಹಲ್ಲೆ ನಡೆಸಲಾಗಿತ್ತು ಎಂದು ಮಹೇಶ್ ಕುಮಾರ್ ದೂರಿನಲ್ಲಿ ತಿಳಿಸಿದ್ದರು.ತತ್ಸಂಂಬಂಧ ಬಿ.ಕೆ. ಸಂಗಮೇಶ್ ಹಾಗೂ ಇತರರ ವಿರುದ್ಧ ಮಹೇಶ್ ಕುಮಾರ್ 2010ರ ಮೇ 22ರಂದು ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ಐಪಿಸಿ 1860ರ ಕಲಂ 120(ಬಿ)ರ ಅಡಿಯಲ್ಲಿ ಅಪರಾಧಿಕ ಪಿತೂರಿ, ಕಲಂ 147ರ ಅಡಿಯಲ್ಲಿ ಗಲಭೆ, ಕಲಂ 307ರ ಅಡಿಯಲ್ಲಿ ಕೊಲೆ ಯತ್ನ ಹಾಗೂ ಕಲಂ 326ರ ಅಡಿಯಲ್ಲಿ ಅಪಾಯಕಾರಿ ಆಯುಧ ಬಳಸಿ ಗಂಭೀರ ಗಾಯ ಉಂಟುಮಾಡಿದ ಆರೋಪಗಳಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.ಈ ಎಲ್ಲಾ ಸೆಕ್ಷನ್​ಗಳ ಅಡಿಯಲ್ಲಿ ತನಿಖೆ ಅಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು.

Author