ಶಿವಮೊಗ್ಗ ತಾಲೂಕು, ಕುಂಸಿ ಹೋಬಳಿಯ ಮಂಡಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ್ಯಾವಿನಕೆರೆ ಗ್ರಾಮದಲ್ಲಿ, ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳ “ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ”ಕ್ಕೆ (RAWE) ಸೆಪ್ಟೆಂಬರ್ 19ರಂದು ಶ್ರಮಿಕ ಸಾಮಾನ್ಯ ಸಭೆಯ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಮುಂದಿನ ಮೂರು ತಿಂಗಳ ಕಾಲ ಕೃಷಿ ವಿಶ್ವವಿದ್ಯಾಲಯದ 13 ವಿದ್ಯಾರ್ಥಿಗಳಾದ ಪ್ರಶಾಂತ ಪು ನಂದೆನ್ನವರ, ಆಶಿತ ಯು ಕೋಟ್ಯಾನ್, ಅನನ್ಯ ಸುರೇಶ್ ನಾಯಕ, ಲಿಖಿತ ಎಚ್.ಆರ್, ಬಸವರಾಜ ಬಿ.ಎಮ್, ದರ್ಶನ್ ಎಚ್., ನಿಮಿತ, ದಿನೇಶ್ ಬಾಬು ವೈ.ಆರ್, ಹಾಲಪ್ಪ, ಕಿರಣ ಮಾ. ಹುನಗುಂದ, ಸುನೀಲ ಎಸ್., ಬೈರೇಶ್ ಮತ್ತು ಗೌತಮಿ ಅವರು ದ್ಯಾವಿನಕೆರೆ ಗ್ರಾಮದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.ಈ ಅವಧಿಯಲ್ಲಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಹೊಸ ತಳಿಗಳನ್ನು ಪರಿಚಯಿಸಿ ಬೆಳೆಯುವುದು, ಬೆಳೆ ಪ್ರತ್ಯಕ್ಷಿತೆ, ಗುಂಪು ಚರ್ಚೆ, ವಸ್ತು ಪ್ರದರ್ಶನ, ತಂತ್ರಜ್ಞಾನ ಪ್ರದರ್ಶನ, ಕೈತೋಟ ನಿರ್ಮಾಣ, ಬೆಳೆ ಸಂಗ್ರಹಾಲಯ ಹಾಗೂ ಮಾಹಿತಿ ಕೇಂದ್ರ ಸ್ಥಾಪನೆಯಂತಹ ವಿವಿಧ ಕಾರ್ಯಕ್ರಮಗಳನ್ನು ವಾರಕ್ಕೆ ಆರು ದಿನಗಳ ಕಾಲ ಆಯೋಜಿಸಲಿದ್ದಾರೆ.
ಈ ಚಟುವಟಿಕೆಗಳು ಕೇವಲ ದ್ಯಾವಿನಕೆರೆಗೆ ಸೀಮಿತವಾಗಿರದೆ, ರಾಗಿಹೊಸಳ್ಳಿ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ರೈತರಿಗೂ ತಲುಪಲಿವೆ.ವಿದ್ಯಾರ್ಥಿಗಳು ನಿರಂತರವಾಗಿ ರೈತರ ತೋಟ ಹಾಗೂ ಜಮೀನುಗಳಿಗೆ ಭೇಟಿ ನೀಡಿ ಕೃಷಿ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಜೊತೆಗೆ ಕೃಷಿ ವಿಜ್ಞಾನಿಗಳು ಸಹ ಗ್ರಾಮಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳಿಗೆ ಸೂಕ್ತ ವೈಜ್ಞಾನಿಕ ಪರಿಹಾರ ಹಾಗೂ ಸಲಹೆಗಳನ್ನು ನೀಡಲಿದ್ದಾರೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.ಸಭೆಯಲ್ಲಿ ಗ್ರಾಮದ ಹಲವು ರೈತರು ಕೃಷಿ ವಿದ್ಯಾರ್ಥಿಗಳ ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಸಂಯೋಜಕರಾದ ಡಾ. ಸಹನಾ ಎಸ್., ಡಾ. ಪ್ರದೀಪ್ ಕುಮಾರ್, ಡಾ. ಪ್ರಶಾಂತ್ ಹಾಗೂ ಗ್ರಾಮದ ಮುಖಂಡರಾದ ಶಿವಮೂರ್ತಿ, ಕೆ. ಮಂಜಪ್ಪ, ತಿಮ್ಮಪ್ಪ ಸೇರಿದಂತೆ ದ್ಯಾವಿನಕೆರೆ ಗ್ರಾಮದ ರೈತ ಬಾಂಧವರು ಮತ್ತು ಮಹಿಳಾ ರೈತರು ಉಪಸ್ಥಿತರಿದ್ದರು.





