ಶಿವಮೊಗ್ಗ | ಖಾಸಗಿ ಬಸ್‌ ನಿರ್ವಾಹಕನ ಮೇಲೆ ಪ್ರಯಾಣಿಕನಿಂದ ಹಲ್ಲೆ?

ಕ್ರೈಂ

ಶಿವಮೊಗ್ಗ, ಬಸ್ ಟಿಕೆಟ್ ಹಣದ ವಿಚಾರಕ್ಕೆ ಜಗಳವಾಡಿದ ಪ್ರಯಾಣಿಕನೊಬ್ಬ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾನೆ. ಕಂಡಕ್ಟರ್‌ ಹೊಸಮನೆಯ ಸಂತೋಷ್ (44) ಎಂಬುವವರು ಗಾಯಗೊಂಡಿದ್ದಾರೆ.ಶಿವಮೊಗ್ಗದಿಂದ ಆಯನೂರು, ಕುಂಸಿ ಮಾರ್ಗವಾಗಿ ಚಲಿಸುವ ಚಾಮುಂಡೇಶ್ವರಿ ಬಸ್‌ನಲ್ಲಿ ಸಂತೋಷ್ ಕರ್ತವ್ಯ ನಿರ್ವಹಿಸುತ್ತಿದ್ದರು.

ನಂದನ್‌ ಎಂಬಾತ ಹಾರನಹಳ್ಳಿಗೆ ಟಿಕೆಟ್‌ ಪಡೆಯಲು ₹20 ನೀಡಿದ್ದಾನೆ. ಆದರೆ ಹಾರನಹಳ್ಳಿಗೆ ಟಿಕೆಟ್ ದರ ₹35 ಇದ್ದು, ಪ್ರತಿದಿನ ಓಡಾಡುವ ಪ್ರಯಾಣಿಕರಾದರೆ ಮಾತ್ರ ₹25 ನೀಡಬೇಕು ಎಂದು ಕಂಡಕ್ಟರ್ ಹೇಳಿದ್ದರು. ಆಗ ನಂದನ್‌, ಇಷ್ಟೇ ಹಣ ಕೊಡುವುದಾಗಿ ತಿಳಿಸಿದ್ದ.

ಬಸ್ ಆಲೊಳ ಸರ್ಕಲ್ ನಿಲ್ದಾಣಕ್ಕೆ ತಲುಪಿದಾಗ ಕಂಡಕ್ಟರ್ ಕೆಳಗೆ ಇಳಿದು ಪ್ರಯಾಣಿಕರನ್ನು ಹತ್ತಿಸುತ್ತಿದ್ದರು. ಈ ವೇಳೆ ನಂದನ್ ಕೂಡ ಬಸ್‌ನಿಂದ ಕೆಳಗೆ ಇಳಿದು ಕಂಡಕ್ಟರ್‌ ಸಂತೋಷ್‌ಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಚಾಲಕ ಮತ್ತಿತರರು ಗಲಾಟೆ ಬಿಡಿಸಿ ಕಂಡಕ್ಟರ್‌ ಸಂತೋಷ್‌ನನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Author