ಶಿವಮೊಗ್ಗ | ಬರ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ : ಉತ್ತರ ಕರ್ನಾಟಕಕ್ಕೆ ಅನ್ಯಾಯ,ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ : ಸಿದ್ದಲಿಂಗಪ್ಪ ನಿಂಬೆಗುಂದಿ

ಶಿವಮೊಗ್ಗ

ಶಿವಮೊಗ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಬರದಿಂದ ತತ್ತರಿಸಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಎಂ. ನಿಂಬೆಗುಂದಿ ಆರೋಪಿಸಿದರು.ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ರೈತ ಮೋರ್ಚಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರೈತ ಮನುಕುಲದ ರಕ್ಷಕ. ಭೂಮಿ ತಾಯಿಯ ಮೇಲೆ ಅಪಾರ ಭಕ್ತಿಯಿಂದ, ಪ್ರತಿಫಲದ ನಿರೀಕ್ಷೆಯಿಲ್ಲದೆ ಕಾಯಕ ಮಾಡುವ ರೈತನಿಗೆ ಸರ್ಕಾರವೇ ದ್ರೋಹ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪದೇಪದೇ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ. ಬರದ ವಾಸ್ತವ ಪರಿಸ್ಥಿತಿಯನ್ನು ವೈಜ್ಞಾನಿಕ ಹಾಗೂ ಮಾನವೀಯ ದೃಷ್ಟಿಕೋನದಿಂದ ಪರಿಶೀಲಿಸದೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಬರಪೀಡಿತ ತಾಲೂಕುಗಳನ್ನು ಘೋಷಿಸುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ದೂರಿದರು.

“ಮಳೆ ಕೊರತೆ, ಮಣ್ಣಿನ ತೇವಾಂಶದ ಕುಸಿತ, ಬೆಳೆ ಹಾನಿ, ಕೆರೆ-ಕುಂಟೆಗಳ ಒಣಗುವಿಕೆ, ಜಲಾಶಯಗಳ ನೀರಿನ ಮಟ್ಟ ಕುಸಿತ ಹಾಗೂ ಅಂತರ್ಜಲದ ತೀವ್ರ ಇಳಿಕೆ—ಇವೆಲ್ಲ ಕಣ್ಣೆದುರಿಗಿದ್ದರೂ ಸರ್ಕಾರಕ್ಕೆ ರೈತರ ನೋವು ಕಾಣುತ್ತಿಲ್ಲ” ಎಂದು ಸಿದ್ದಲಿಂಗಪ್ಪ ನಿಂಬೆಗುಂದಿ ಹೇಳಿದರು.ಸರ್ಕಾರದ ಅಂಕಿಅಂಶಗಳ ಪ್ರಕಾರ ಮಲೆನಾಡು ಭಾಗದಲ್ಲಿ ಶೇ.34, ಕರಾವಳಿಯಲ್ಲಿ ಶೇ.30, ಉತ್ತರ ಒಳನಾಡಿನಲ್ಲಿ ಶೇ.24 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.18ರಷ್ಟು ಮಳೆ ಕೊರತೆ ಕಂಡುಬಂದಿದೆ. ಮುಂಗಾರು ಹಂಗಾಮಿನಲ್ಲಿ ರಾಜ್ಯದ 84 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಭೂಮಿಯಲ್ಲಿ ಕೇವಲ ಶೇ.60ರಷ್ಟು ಮಾತ್ರ ಬಿತ್ತನೆಯಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಬಿಜೆಪಿ ತಂಡ ರಾಜ್ಯಾದ್ಯಂತ ಪ್ರವಾಸ ಮಾಡಿದ ಸಂದರ್ಭದಲ್ಲಿ ಕಂಡ ವಾಸ್ತವ ಸ್ಥಿತಿ ಇದಕ್ಕಿಂತ ಭಿನ್ನವಾಗಿದೆ ಎಂದರು.

“ಕೆಲವು ಜಿಲ್ಲೆಗಳಲ್ಲಿ ಭೂಮಿಯನ್ನೇ ಉತ್ತಿಲ್ಲ. ಉತ್ತ ಭೂಮಿಯಲ್ಲಿ ಬೀಜ ಬಿತ್ತಿಲ್ಲ. ಬಿತ್ತಿದ ಬೀಜ ಮೊಳಕೆಯೊಡೆದಿಲ್ಲ. ಪೈರು ಬಂದಿಲ್ಲ. ಬಂದ ಪೈರಿನಲ್ಲಿ ಕೆಲವು ಕಡೆ ಕಾಳು ಕಟ್ಟಿಲ್ಲ. ಇನ್ನೂ ಕೆಲವು ಕಡೆ ಹಸಿರು ಬರದ ಪರಿಸ್ಥಿತಿ ಇದೆ. ಇಂತಹ ವಾಸ್ತವವನ್ನು ಸರ್ಕಾರ ಹೇಗೆ ನಿರ್ಲಕ್ಷಿಸುತ್ತದೆ?” ಎಂದು ಪ್ರಶ್ನಿಸಿದರು.ಮುಖ್ಯಮಂತ್ರಿಗಳು ದೆಹಲಿ ಪ್ರವಾಸ ಹಾಗೂ ಹೈಕಮಾಂಡ್‌ಗೆ ಸಮಯ ನೀಡುವ ಬದಲು ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಂಕಷ್ಟವನ್ನು ನೇರವಾಗಿ ಅವಲೋಕಿಸಬೇಕಿತ್ತು. ಶಾಸಕರು ಮತ್ತು ಸಚಿವರು ಬರಪೀಡಿತ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಬೇಕೆಂದು ಪತ್ರಿಕಾ ಹೇಳಿಕೆ ನೀಡಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.

ಬರ ನಿರ್ವಹಣೆಗೆ ನಿಯೋಜಿಸಲಾದ ಸರ್ಕಾರದ ಉಸ್ತುವಾರಿಗಳು ಜಿಲ್ಲಾಧಿಕಾರಿ ಕಚೇರಿಗಳಿಗೆ ಸೀಮಿತರಾಗಿದ್ದು, ಬರಪೀಡಿತ ಗ್ರಾಮಗಳಿಗೆ ತೆರಳಿ ವಾಸ್ತವ ಸ್ಥಿತಿ ಪರಿಶೀಲಿಸುವ ಬದಲು ಆನ್‌ಲೈನ್ ಕಾರ್ಯಕ್ರಮಗಳಿಗೆ ಮೊರೆ ಹೋಗಿದ್ದಾರೆ. “ಕಚೇರಿಯಲ್ಲಿ ಕುಳಿತು ಬರ ನಿರ್ವಹಣೆ ಮಾಡಲು ಸಾಧ್ಯವಿಲ್ಲ; ರೈತನ ಹೊಲಕ್ಕೆ ಇಳಿದು ಸಮಸ್ಯೆ ಅರಿತಾಗ ಮಾತ್ರ ಬರದ ನಿಜವಾದ ಚಿತ್ರಣ ಸಿಗುತ್ತದೆ” ಎಂದು ಹೇಳಿದರು.ಬೆಳಗಾವಿ ವಿಭಾಗದಲ್ಲಿ 60 ತಾಲೂಕುಗಳಿದ್ದರೂ ಕೇವಲ 9 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ 49 ತಾಲೂಕುಗಳಿದ್ದು, ಕೇವಲ 21 ತಾಲೂಕುಗಳಲ್ಲಿ ಬರ ಘೋಷಿಸಲಾಗಿದೆ. ಇದು ಆ ಭಾಗದ ರೈತರಿಗೆ ಸರ್ಕಾರ ತೋರಿಸುತ್ತಿರುವ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಿದ್ದಲಿಂಗಪ್ಪ ನಿಂಬೆಗುಂದಿ ಆರೋಪಿಸಿದರು.

2019ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎನ್‌ಡಿಆರ್‌ಎಫ್ ನೆರವಿನ ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಪರಿಹಾರ ನೀಡುವ ಕ್ರಮ ಕೈಗೊಂಡಿದ್ದರು. ಆದರೆ ಈಗಿನ ಸರ್ಕಾರ ರೈತರ ಸಂಕಷ್ಟಕ್ಕೆ ಅದೇ ರೀತಿಯ ಪರಿಣಾಮಕಾರಿ ನೆರವು ನೀಡುವಲ್ಲಿ ವಿಫಲವಾಗಿದೆ ಎಂದು ಅವರು ಹೇಳಿದರು.“ರೈತನ ಬೆವರಿನಿಂದ ರಾಜ್ಯದ ಆರ್ಥಿಕತೆ ನಿಂತಿದೆ. ಆ ರೈತನ ಹೊಲ ಒಣಗಿದಾಗ ಸರ್ಕಾರದ ಕಣ್ಣು ತೆರೆಯಬೇಕು. ರೈತನ ಕಣ್ಣೀರಿಗೆ ಬೆಲೆ ಕಟ್ಟದ ಸರ್ಕಾರ ಎಷ್ಟೇ ಅಂಕಿಅಂಶಗಳನ್ನು ಹೇಳಿದರೂ ಜನರು ವಾಸ್ತವವನ್ನು ಅರಿಯುತ್ತಾರೆ” ಎಂದು ಸಿದ್ದಲಿಂಗಪ್ಪ ನಿಂಬೆಗುಂದಿ ವಾಗ್ದಾಳಿ ನಡೆಸಿದರು.

ಮಳೆ ಮಾಪನ ಕೇಂದ್ರಗಳ ತಾಂತ್ರಿಕ ಸಮಸ್ಯೆ, ಹವಾಮಾನ ಮಾಪನ ಕೇಂದ್ರಗಳ ಅಸಮರ್ಪಕ ಕಾರ್ಯವೈಖರಿ, ಕಂದಾಯ ಮತ್ತು ಕೃಷಿ ಇಲಾಖೆಗಳ ಸಿಬ್ಬಂದಿ ಕೊರತೆ ಸೇರಿದಂತೆ ಬರ ನಿರ್ವಹಣೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ರೈತರ ಪರವಾಗಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಬಿಳಕಿ, ಕುಮಾರ್ ನಾಯ್ಡು, ಕಾರ್ಯದರ್ಶಿಗಳಾದ ರುದ್ರೇಶ್, ಕಿರಣ್, ಮಾಧ್ಯಮದ ಚಂದ್ರಶೇಖರ್ ಎಸ್. ಹಾಗೂ ಮಂಜುನಾಥ್ ಎನ್. ಉಪಸ್ಥಿತರಿದ್ದರು.

Author