ಶಿವಮೊಗ್ಗ, ತ್ಯಾವರೆಕೊಪ್ಪದ ಹುಲಿ ಸಿಂಹ ಧಾಮದಲ್ಲಿ ತರಬೇತಿ ನಿರತ ಪಶು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣವಾಗಿದ್ದ ನೀರಾನೆ ‘ಹಂಸಿಣಿ’ (Hippopotamus) ಇಂದು ಅನಾರೋಗ್ಯದಿಂದ ಮೃತಪಟ್ಟಿದೆ.
ಗರ್ಭಾಶಯದ ಸೋಂಕಿನಿಂದ ಬಳಲುತ್ತಿದ್ದ “ಹಂಸಿಣಿ” ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದೆ.ಮೃತ ಹಂಸಿಣಿ ಗರ್ಭ ಧರಿಸಿದ್ದು, ಎಂಟು ತಿಂಗಳ ಗರ್ಭಧಾರಣೆಯ ಅವಧಿಯು ಮಾರ್ಚ್ ಮಧ್ಯಭಾಗದಲ್ಲೇ ಪೂರ್ಣಗೊಂಡಿದ್ದರೂ, ಅದರಲ್ಲಿ ಪ್ರಸವದ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಭ್ರೂಣ ಹೊಟ್ಟೆಯಲ್ಲಿಯೇ ಮೃತಪಟ್ಟಿತ್ತು.
ಕಳೆದ ಕೆಲವು ದಿನಗಳಿಂದ ಆಹಾರ ಸೇವನೆ ಕಡಿಮೆ ಮಾಡಿ ಮಂದಗತಿಯಲ್ಲಿ ವರ್ತಿಸುತ್ತಿದ್ದ ಕಾರಣ, ಏಪ್ರಿಲ್ 10ರಂದು ಮೈಸೂರಿನ ಕರ್ನಾಟಕ ಮೃಗಾಲಯ ಪ್ರಾಧಿಕಾರದ ವನ್ಯಜೀವಿ ಪಶುವೈದ್ಯರ ತಂಡ ನೀರಾನೆಯ ಆರೋಗ್ಯದ ತಪಾಸಣೆ ನಡೆಸಿತ್ತು.
ಈ ವೇಳೆ ಅದರ ಗರ್ಭಾಶಯದಲ್ಲಿ (Infection)ಇರುವುದು ಪತ್ತೆಯಾಗಿತ್ತು.
ಗರ್ಭಾಶಯದ ಒಳಗಿನ ಭ್ರೂಣದ ಸಾವಿನಿಂದ ಈ ಸೋಂಕು ಉಂಟಾಗಿದ್ದು, ಇದು ಬಹು ಅಂಗಾಂಗಗಳ ವೈಫಲ್ಯಕ್ಕೆ ಕಾರಣವಾಗಿ ನೀರಾನೆ ಮೃತಪಟ್ಟಿದೆ ಎಂದು ಹುಲಿ ಸಿಂಹಧಾಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರಾಕ್ಷರ ತಿಳಿಸಿದ್ದಾರೆ.


