ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ ಕುಮಾರಸ್ವಾಮಿ, ಸದಾ ಶಿವಧ್ಯಾನದಲ್ಲೇ ಇರುತ್ತಿದ್ದ ತಮ್ಮ ತಾಯಿಯನ್ನು ಶಿವನೇ ತನ್ನಲ್ಲಿಗೆ ಕರೆಸಿಕೊಂಡಿದ್ದಾನೆ ಅನ್ನೋ ನಂಬಿಕೆ ನನ್ನದು ಎಂದು ಭಾವುಕವಾಗಿ ಬರೆದಿದ್ದಾರೆ. ಅದರೊಂದಿಗೆ ತಾಯಿಯ ಜೊತೆಗಿನ ನಾಲ್ಕು ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮೂರು ಫೋಟೋಗಳಲ್ಲಿ ತಾಯಿಯ ಕಾಲಿಗೆ ನಮಸ್ಕಾರ ಮಾಡುವ ಫೋಟೋ ಆಗಿದ್ದರೆ, ಇನ್ನೊಂದು ಫೋಟೋದಲ್ಲಿ ತಾಯಿ ನೀಡುತ್ತಿರುವ ಪ್ರಸಾದವನ್ನು ಸ್ವೀಕರಿಸುತ್ತಿರುವ ಕೊಂಚ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.

‘ನನ್ನ ಪೂಜ್ಯ ಮಾತೃಶ್ರೀ ಶ್ರೀಮತಿ ಚನ್ನಮ್ಮ ದೇವೇಗೌಡರು ಇಂದು ಶಿವೈಕ್ಯರಾದರು. ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುಣಮುಖರಾಗಿ ಮನೆಗೆ ಮರಳುತ್ತಾರೆನ್ನುವ ನಿರೀಕ್ಷೆ ನನ್ನದಾಗಿತ್ತು. ಆದರೆ, ನನ್ನ ತಾಯಿ ನಮ್ಮನ್ನಗಲಿದ್ದಾರೆ. ಸದಾ ಶಿವಧ್ಯಾನದಲ್ಲಿ ತಲ್ಲೀನರಾಗಿರುತ್ತಿದ್ದ ಅಮ್ಮನವರನ್ನು ಆ ಶಿವನೇ ತನ್ನಲ್ಲಿಗೆ ಕರೆಸಿಕೊಂಡಿದ್ದಾನೆ ಎನ್ನುವುದು ನನ್ನ ನಂಬಿಕೆ. ಆ ಭಗವಂತನ ಸನ್ನಿಧಿಯಲ್ಲಿ ಅವರಿಗೆ ಸದ್ಗತಿ ದೊರೆಯಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ‘ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಗಂಡ ಮಾಜಿ ಪಿಎಂ, ಒಬ್ಬ ಮಗ ಮಾಜಿ ಸಿಎಂ, ಇನ್ನೊಬ್ಬ ಮಗ ಮಾಜಿ ಸಚಿವ. ಇಡೀ ರಾಜಕೀಯ ನಾಯಕರನ್ನು ತನ್ನ ಅಕ್ಕಪಕ್ಕದಲ್ಲೇ ಇರಿಸಿಕೊಂಡರೂ ಚೆನ್ನಮ್ಮ ದೇವೇಗೌಡರು ಹೊರಗೆ ಕಾಣಿಸಿಕೊಳ್ಳುತ್ತಿದ್ದದ್ದು ಬಹಳ ವಿರಳ.
ದೇವೇಗೌಡರ ಜೊತೆ ಒಮ್ಮೊಮ್ಮೆ ಮಗ ಕುಮಾರಸ್ವಾಮಿ ಜೊತೆ ಫೋಟೋದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೊಮ್ಮಕ್ಕಳು, ಮರಿಮೊಮ್ಮಕ್ಕಳನ್ನು ಎತ್ತಿ ಆಡಿಸಿದ ಹಿರಿಯ ಜೀವ ಅದು. ಎಚ್ಡಿ ದೇವೇಗೌಡರ ಜೊತೆ 72 ವರ್ಷಗಳ ತುಂಬು ಸಂಸಾರ ನಡೆಸಿದ್ದ ಚೆನ್ನಮ್ಮ ಶನಿವಾರ ಸಂಜೆ 4 ಗಂಟೆಗೆ ವಿಧಿವಶರಾದರು.
