ಬಂಟ್ವಾಳ, ಬಿ.ಸಿ. ರೋಡ್ನಲ್ಲಿ ಲಾವಣ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ಪ್ರಚೋದನಕಾರಿ ಪೋಸ್ಟ್ ಪ್ರಸಾರ ಮಾಡಿದ ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ವಿವಿಧ ವಾಟ್ಸ್ಆಪ್ ಗ್ರೂಪ್ಗಳು ಹಾಗೂ ಇನ್ಸ್ಟಾಗ್ರಾಂ ಖಾತೆಗಳ ಮೂಲಕ ಆರೋಪಿಯ ಭಾವಚಿತ್ರಕ್ಕೆ ಕೇಸರಿ ಶಾಲು ಹಾಗೂ ಕುಂಕುಮ ಅಳವಡಿಸಿ, ಭಜರಂಗದಳದ ಕಾರ್ಯಕರ್ತ ಎಂದು ಎಡಿಟ್ ಮಾಡಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ಬರಹಗಳನ್ನು ಹಾಕಿರುವುದಕ್ಕೆ ಸಂಬಂಧಿಸಿ ಒಟ್ಟು 6 ವಾಟ್ಸ್ಆಪ್ ಗ್ರೂಪ್ಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಫೇಸ್ ಬುಕ್ ನಲ್ಲಿ ಶೈಲಜಾ ಎಂಬವರ ಖಾತೆಯಲ್ಲಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಫೋಸ್ಟ್ ಹಾಕಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಚೇತನ್ ಬೆಳ್ಳಾಡ ಎಂಬ ಪೇಸ್ ಬುಕ್ ಖಾತೆಯಲ್ಲಿ ಪ್ರಕರಣದ ಆರೋಪಿಯ ಪೋಟೋವನ್ನು ಕಾಂಗ್ರೆಸ್ ಪಾರ್ಟಿಯ ಕಾರ್ಯಕರ್ತ ಎಂದು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಮೇಲಿನ 3 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

