ಶಿವಮೊಗ್ಗ,ನಗರದ ಹೊರವಲಯದ ಹಳೆ ಮಂಡಳಿ ಪ್ರದೇಶದಲ್ಲಿರುವ ಪೇಪರ್ ಗೋಡೌನ್ನಲ್ಲಿ ಇಂದು ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಗೋಡೌನ್ನ ಬಹುತೇಕ ಭಾಗ ಬೆಂಕಿಗೆ ಆಹುತಿಯಾಗಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿವೆ. ಗೋಡೌನ್ನಲ್ಲಿ ಸಂಗ್ರಹಿಸಲಾಗಿದ್ದ ಕಾಗದದ ರಾಶಿಗಳಿಂದ ಬೆಂಕಿ ವೇಗವಾಗಿ ವ್ಯಾಪಿಸಿದ್ದರಿಂದ ನಂದಿಸುವ ಕಾರ್ಯ ಸವಾಲಿನದ್ದಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿಗೆ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ. ಸದ್ಯಕ್ಕೆ ಸಾವು-ನೋವು ಸಂಭವಿಸಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು,

ಹೆಚ್ಚಿನ ವಿವರಗಳು ತನಿಖೆಯ ಬಳಿಕವೇ ತಿಳಿದುಬರಬೇಕಿದೆ.ಅಗ್ನಿ ಅವಘಡದಿಂದ ಉಂಟಾದ ನಷ್ಟದ ಪ್ರಮಾಣ ಇನ್ನಷ್ಟೇ ಅಂದಾಜಿಸಲಾಗಬೇಕಿದ್ದು, ಘಟನೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
