ಶಿವಮೊಗ್ಗ,ಇನ್ಸ್ಟಾಗ್ರಾಮ್ನಲ್ಲಿ ಜ್ಯೋತಿಷ್ಯದ ಜಾಹೀರಾತನ್ನು ನಂಬಿದ ಯುವತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಯುವತಿ ಇನ್ಸ್ಟಾಗ್ರಾಮ್ ನೋಡ್ತಿದ್ದ ವೇಳೆ ಜ್ಯೋತಿಷ್ಯದ ಜಾಹೀರಾತೊಂದು ಕಾಣಿಸಿತ್ತು. ಅದರಲ್ಲಿ ಸಿಂಗದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯಾಲಯ, ಎಂದು ವ್ಯಕ್ತಿಯೊಬ್ಬರ ಪೋನ್ ನಂಬರ್ ಹಾಗೆಯೇ ಹೆಸರನ್ನು ನಮೂದಿಲಾಗಿತ್ತು. ಸಂತ್ರಸ್ತೆಯ ತಾಯಿಗೆ ತೀವ್ರ ಆರೋಗ್ಯ ಸಮಸ್ಯೆಗಳಿದ್ದ ಕಾರಣ, ಪರಿಹಾರ ಸಿಗಬಹುದೆಂಬ ಆಸೆಯಿಂದ ಆ ನಂಬರ್ಗೆ ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿಯೊಬ್ಬ ಸಮಸ್ಯೆಯ ನಿವಾರಣೆಗೆ ಪೂಜೆ ಮಾಡಬೇಕೆಂದು ತಿಳಿಸಿ ಮೊದಲು ಕಾಣಿಕೆಯಾಗಿ 501 ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಲು ಸೂಚಿಸಿದ್ದನು. ಅದನ್ನು ನಂಬಿದ ಯುವತಿ ತಕ್ಷಣವೇ ಗೂಗಲ್ ಪೇ ಮಾಡಿದ್ದರು.
ಮೊದಲ ಕಂತಿನ ಹಣ ಕೈಸೇರಿದ ಕೇವಲ ಅರ್ಧ ಗಂಟೆಯಲ್ಲೇ ವಂಚಕರು ಯುವತಿಗೆ ಮರಳಿ ಕರೆ ಮಾಡಿ, ನಿಮ್ಮ ತಾಯಿಗೆ ಯಾರೋ ಮಾಟ-ಮಂತ್ರ ಮಾಡಿಸಿದ್ದಾರೆ, ಅದಕ್ಕೆ ತಕ್ಷಣ ದೊಡ್ಡ ಪೂಜೆ ಮಾಡದಿದ್ದರೆ ಪ್ರಾಣಕ್ಕೆ ಕುತ್ತು ಬರಲಿದೆ ಎಂದು ಭಯ ಹುಟ್ಟಿಸಿದ್ದಾರೆ. ಪೂಜೆಯ ವೆಚ್ಚವಾಗಿ 25,000 ಬೇಡಿಕೆಯಿಟ್ಟಾಗ, ತಾಯಿಯ ಜೀವ ಉಳಿದರೆ ಸಾಕೆಂದು ಯುವತಿ ಅವರು ಹೇಳಿದ ಫೋನ್ ಪೇ ನಂಬರ್ಗೆ ಹಣ ಕಳುಹಿಸಿದ್ದಾರೆ.
ತದನಂತರ, ನಮ್ಮ ಮುಖ್ಯ ಗುರೂಜಿ ಎಂದು ಪರಿಚಯಿಸಿ ಮತ್ತೊಂದು ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ಆ ವ್ಯಕ್ತಿಯೂ ಸಹ ತಾಯಿ ಮತ್ತು ಮಗಳ ಹಸ್ತದ ಹಾಗೂ ಮುಖದ ಫೋಟೋಗಳನ್ನು ವಾಟ್ಸಾಪ್ಗೆ ತರಿಸಿಕೊಂಡಿದ್ದಾನೆ. ಪೂಜೆ ಮಾಡುತ್ತಿರುವಂತೆ ನಕಲಿ ಫೋಟೋಗಳನ್ನು ಕಳುಹಿಸಿ ಯುವತಿಯನ್ನು ಸಂಪೂರ್ಣವಾಗಿ ನಂಬಿಸಿದ್ದಾನೆ. ತಾಯಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಪದೇ ಪದೇ ಹೆದರಿಸುತ್ತಾ, ಹಂತ ಹಂತವಾಗಿ ಒಟ್ಟು 1,84,302 ಹಣವನ್ನು ವಿವಿಧ ಮೊಬೈಲ್ ನಂಬರ್ಗಳಿಗೆ ವರ್ಗಾವಣೆ ಮಾಡಿಸಿಕೊಂಡು ವಂಚನೆ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಕೊನೆಗೆ ತಾನು ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತೆ, ವಂಚಕರನ್ನು ಪತ್ತೆ ಹಚ್ಚಿ ತನ್ನ ಹಣವನ್ನು ವಾಪಸ್ ಕೊಡಿಸಬೇಕೆಂದು ಶಿವಮೊಗ್ಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.


