ಶಿಕಾರಿಪುರ | ಗಾಂಜಾ ಮಾರಾಟ ; ಇಬ್ಬರು ಪೊಲೀಸ್ ವಶಕ್ಕೆ

ಕ್ರೈಂ

ಶಿಕಾರಿಪುರ ಟೌನ್‌ನ ಯಾತ್ರಿ ನಿವಾಸದ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶಿಕಾರಿಪುರ ಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಸಾವಿರಾರು ರೂಪಾಯಿ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಲಾಗಿದೆ.

ಜೂನ್ 17 ರಂದು ಶಿಕಾರಿಪುರ ಟೌನ್‌ನ ಯಾತ್ರಿ ನಿವಾಸಕ್ಕೆ ತೆರಳುವ ಸಾರ್ವಜನಿಕ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು.

ಈ ಸುಳಿವಿನ ಮೇರೆಗೆ ಕಾರ್ಯಾಚರಣೆಗಿಳಿದ ಶಿಕಾರಿಪುರ ಟೌನ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ತಂಡ, ದಿಢೀರ್ ದಾಳಿ ನಡೆಸಿ 32 ವರ್ಷದ ಸುನೀಲ್ ನಾಯ್ಕ್ ಹಾಗೂ 30 ವರ್ಷದ ಸುನೀಲ್ ಟಿ.ವಿ ಎಂಬಿಬ್ಬರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ.

ಬಂಧಿತ ಆರೋಪಿಗಳಿಂದ ಅಂದಾಜು 15,000 ರೂಪಾಯಿ ಮೌಲ್ಯದ ಒಟ್ಟು 658 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Author