ಶಿವಮೊಗ್ಗ: ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಕಾರಿನಿಂದ ಡಿಕ್ಕಿ ಹೊಡೆಸಿ, ಕಬ್ಬಿಣದ ರಾಡ್ನಿಂದ ತಲೆ ಹಾಗೂ ಮೈಕೈಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಸಂತೆಕಡೂರು ಬಳಿ ಸಂಭವಿಸಿದೆ.
ಘಟನೆ ವಿವರ
ದೂರುದಾರರು ಮತ್ತು ಆರೋಪಿಯ ಇಬ್ಬರು ಮಕ್ಕಳ ನಡುವೆ ಕಳೆದ ಮೂರು ತಿಂಗಳ ಹಿಂದೆ ಗಲಾಟೆಯಾಗಿತ್ತು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿ ಮತ್ತು ಆತನ ಇಬ್ಬರು ಮಕ್ಕಳು ಹಾಗೂ ಇತರೆ ಇಬ್ಬರು ಸಹಚರರು ದೂರುದಾರರು ಸಂತೆಕಡೂರಿನಲ್ಲಿರುವ ನೆಂಟರ ಮನೆಗೆ ಹೋಗಿ ತಮ್ಮ ಬೈಕಿನಲ್ಲಿ ವಾಪಾಸ್ ಬರುತ್ತಿದ್ದಾಗ, ಸ್ವಿಫ್ಟ್ ಕಾರಿನಲ್ಲಿ ಬಂದು ಕೊಲೆ ಮಾಡುವ ಉದ್ದೇಶದಿಂದ ಬೈಕಿಗೆ ಜೋರಾಗಿ ಡಿಕ್ಕಿ ಹೊಡೆಸಿದ್ದಾರೆ ಎನ್ನಲಾಗಿದೆ.
ಬೈಕಿನಿಂದ ಕೆಳಗೆ ಬಿದ್ದ ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿ ಮತ್ತು ಆತನ ಮಕ್ಕಳು ಮನಬಂದಂತೆ ಥಳಿಸಿದ್ದಾರೆ. ತದನಂತರ ಆರೋಪಿ ಇವನನ್ನು ಸಾಯಿಸಿಬಿಡಿ ಎಂದು ಕೂಗಿದಾಗ, ಆತನ ಮಗ ಕಾರಿನಿಂದ ಕಬ್ಬಿಣದ ರಾಡ್ ತಂದಿದ್ದಾನೆ. ಅದನ್ನು ಕಸಿದುಕೊಂಡ ಮತ್ತೊಬ್ಬ ಮಗ ದೂರುದಾರರ ತಲೆಯ ಹಿಂಭಾಗ, ಹಣೆಯ ಎಡಭಾಗ ಹಾಗೂ ಎರಡು ಮೊಣಕೈಗಳಿಗೆ ಬಲವಾಗಿ ಹೊಡೆದು ರಕ್ತಗಾಯಗೊಳಿಸಿದ್ದಾನೆ.
ದೂರುದಾರರು ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ, ಸತ್ತಿದ್ದಾನೆ ಎಂದು ಭಾವಿಸಿದ ಹಂತಕರ ಗುಂಪು ಕಾರಿನಲ್ಲಿ ಪರಾರಿಯಾಗಿದೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ತಕ್ಷಣವೇ ಅಲ್ಲಿದ್ದ ಆಟೋ ಒಂದರ ಸಹಾಯದೊಂದಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ನೀಡಿದ ದೂರಿನನ್ವಯ, ಪ್ರಾಣ ತೆಗೆಯಲು ಯತ್ನಿಸಿದ ಆರೋಪಿಗಳಾದ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


