ಶಿವಮೊಗ್ಗ | ನವಜಾತ ಶಿಶು ಪತ್ತೆ

ಶಿವಮೊಗ್ಗ

ಶಿವಮೊಗ್ಗ, ತಾಲೂಕಿನ ಗಡಿಯಲ್ಲಿರುವ ಎನ್ ಆರ್ ಪುರ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದ ಸೂರುಗುಡಿಗೆಯ ದೇವಸ್ಥಾನದ ಸಮೀಪದ ಮುಳ್ಳಿನ ಪೊದೆಯಲ್ಲಿ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದೆ.

ಕಣಿವೆ ಗ್ರಾಮದ ಸೂರುಗುಡಿಗೆಯಲ್ಲಿ ಮಂಗಳವಾರ ಬೆಳಿಗ್ಗೆ ಗ್ರಾಮದ ನೀರುಗಂಟಿ ಶ್ರೀನಿವಾಸ್ ಅವರು ನೀರು ಸರಬರಾಜು ಮಾಡಲು ತೆರಳಿದಾಗ ದೇವಸ್ಥಾನದ ಸಮೀಪದ ಪೊದೆಯಲ್ಲಿ ಮಗು ಅಳುವ ಶಬ್ದ ಕೇಳಿ ಬಂದಿದೆ.

ಸ್ಥಳಕ್ಕೆ ಹೋಗಿ ನೋಡಿದಾಗ ರಕ್ತ-ಸಿಕ್ತವಾದ ಶಿಶುವನ್ನು ಟವೆಲ್‌ನಲ್ಲಿ ಸುತ್ತಿ ಇಡಲಾಗಿತ್ತು. ಈ ವಿಷಯವನ್ನು ಗ್ರಾಮಸ್ಥರಿಗೆ ಮುಟ್ಟಿಸಿದ ಶ್ರೀನಿವಾಸ್, ಶಿಶುವನ್ನು ಮನೆಗೆ ತೆಗೆದುಕೊಂಡು ಆರೈಕೆ ಮಾಡಿದ್ದಾರೆ. ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಹಾಗೂ ಗ್ರಾಮಸ್ಥ ಅವಿನಾಶ್ ಪೊಲೀಸರಿಗೆ ಮಾಹಿತಿ ನೀಡಿದರು.

ಕೂಡಲೇ ಸ್ಥಳಕ್ಕೆ ಬಂದ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮತ್ತು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಶಿಶುವಿನ ಆರೈಕೆ ಮಾಡಿ ಆಂಬುಲೆನ್ಸ್‌ನಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಬಗ್ಗೆ ಕರೆ ಬಂದ ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿ ಕಳುಹಿಸಿ, ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಕಂಡು ಬಂದಿದ್ದರಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಶಿಶು 2.50 ಕೆ.ಜಿ ತೂಕವಿದೆ ಎಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ಮಾಹಿತಿ ನೀಡಿದ್ದಾರೆ.

Author