ಕಾಂಗ್ರೆಸ್ ಜೊತೆ ಮೈತ್ರಿಮಾಡಿಕೊಳ್ಳದೆ ಇರುವುದೇ ಮಮತಾಗೆ ಈಗಿನ ದುಸ್ಥಿತಿಗೆ ಕಾರಣ..! : ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ ಹೇಳಿಕೆ

ರಾಜಕೀಯ

ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದರೆ, ಅವರಿಗೆ ಈಗಿನ ದುಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ ಸೋಮವಾರ ಹೇಳಿದ್ದಾರೆ.

ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 294 ಸ್ಥಾನಗಳಲ್ಲಿ 207 ಸ್ಥಾನಗಳನ್ನು ಗೆದ್ದು, ಬ್ಯಾನರ್ಜಿಯವರ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದೆ. ಇದೀಗ ಟಿಎಂಸಿ ವಿರೋಧ ಪಕ್ಷಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಠಾಕೂರ್ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ವೃಂದಾವನಕ್ಕೆ ಆಗಮಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮಮತಾ ಬ್ಯಾನರ್ಜಿ ಕಾಂಗ್ರೆಸ್ ಜೊತೆ ಸೇರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, ಅವರಿಗೆ ಈಗಿನ ದುಸ್ಥಿತಿ ಎದುರಾಗುತ್ತಿರಲಿಲ್ಲ’ ಎಂದು ತಿವಾರಿ ಹೇಳಿದರು.

ತಿವಾರಿ ಅವರೊಂದಿಗೆ ಉತ್ತರ ಪ್ರದೇಶ ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಿ ಆರಾಧನಾ ಮಿಶ್ರಾ ಇದ್ದರು.ಬಿಜೆಪಿ ಮತ್ತು ಚುನಾವಣಾ ಆಯೋಗದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಅವರು, ಇತ್ತೀಚೆಗೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಗಳನ್ನು ಉಲ್ಲೇಖಿಸಿದರು.

ದೇಶದಲ್ಲಿ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಚುನಾವಣಾ ಪ್ರಕ್ರಿಯೆಗಳಲ್ಲಿ ಕೇಂದ್ರ ಸರ್ಕಾರ ಮತ್ತು ಸಾಂವಿಧಾನಿಕ ಸಂಸ್ಥೆಗಳು ಹಸ್ತಕ್ಷೇಪ ಮಾಡುತ್ತಿರುವ ರೀತಿ ಸಂವಿಧಾನಕ್ಕೆ ಹಾನಿಕಾರಕವಾಗಿದೆ ಎಂದು ಆರೋಪಿಸಿದರು.

Author