ಕರ್ನಾಟಕದ ಹೆಮ್ಮೆಯ ಬ್ಯಾಂಕುಗಳ ಹೆಸರುಗಳು ಮಾಯವಾಗುತ್ತಿದೆ : ಪಿ ಎಂ ಮಾಲತೇಶ್ ಆಕ್ರೋಶ

ಶಿವಮೊಗ್ಗ

ಭಾರತ ದೇಶದಲ್ಲಿ ಕರ್ನಾಟಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನು ಮಾಡಿ, ದೇಶದ ಆರ್ಥಿಕ ಪ್ರಗತಿಗೆ ಅಪಾರವಾದ ಕೊಡುಗೆಯನ್ನ ನೀಡಿದಂತಹ ಇತಿಹಾಸವಿದೆ. ನಮ್ಮ ನಾಡಿನ ಹೆಮ್ಮೆಯ ಬ್ಯಾಂಕುಗಳಾದಂತಹ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಈಗ ಆಗಲೇ ಅನ್ಯ ಬ್ಯಾಂಕುಗಳೊಂದಿಗೆ ವಿಲೀನಗೊಂಡು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದೆ. ಈಗ, ಇದೇ ಸಾಲಿಗೆ ನಮ್ಮ ಮತ್ತೊಂದು ಹೆಮ್ಮೆಯ ಬ್ಯಾಂಕ್, ಕೆನರಾ ಬ್ಯಾಂಕ್ ಸಹ ಅನ್ಯಬ್ಯಾಂಕಿನೊಂದಿಗೆ ವಿಲೀನಗೊಂಡು ತಮ್ಮ ಅಸ್ತಿತ್ವವನ್ನ ಕಳೆದುಕೊಳ್ಳುತ್ತಿದೆ.

ಇದು ನಿಜಕ್ಕೂ ಕನ್ನಡಿಗರಿಗೆ ಅತ್ಯಂತ ಬೇಸರದ ಸಂಗತಿಯಾಗಿದೆ. 1906 ಮಾರ್ಚ್ 12ರಂದು ಕಾರ್ಪೊರೇಷನ್ ಬ್ಯಾಂಕ್ ಸ್ಥಾಪನೆಯಾಯಿತು ಶ್ರೀ ಸೂರ್ಯದೇವ ಶರ್ಮ ಮತ್ತು ಹಾಜಿ ಅಬ್ದುಲ್ ಹಾಜಿಕಾನ್ ಕಾಸಿಂ ಸಾಹೇಬ್ ಇವರ ಪರಿಶ್ರಮದಿಂದ ಮಂಗಳೂರಿನಲ್ಲಿ ಈ ಬ್ಯಾಂಕು ಸ್ಥಾಪನೆಯಾಗಿ ನೂರಾರು ವರ್ಷಗಳ ಕಾಲ ನಾಡಿನ ಜನರ ಸೇವೆಯನ್ನ ಸಲ್ಲಿಸಿತ್ತು. 1906ರ ಇಸವಿಯಲ್ಲಿ ಕೆನರಾ ಬ್ಯಾಂಕ್ ಸ್ಥಾಪನೆಯಾಯಿತು ಅಮ್ಮೆಂಬಳ ಸುಬ್ಬರಾವ್ ಪೈ, ಇದರ ಸ್ಥಾಪಕರಾಗಿದ್ದರು.

ಈ ಬ್ಯಾಂಕ್ ಭಾರತ ದೇಶದಲ್ಲಿಯೇ ಅತ್ಯಂತ ಹೆಮ್ಮೆಯ ಬ್ಯಾಂಕ್ ಆಗಿತ್ತು, ಈಗ ಈ ಬ್ಯಾಂಕ್ ಸಹ ವಿಲೀನ ವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. 1931ರ ಅಕ್ಟೋಬರ್ 23ರಂದು ಮಂಗಳೂರಿನಲ್ಲಿ ಎ ಬಿ ಶೆಟ್ಟಿ ಇವರ ಪರಿಶ್ರಮದಿಂದ ವಿಜಯ ಬ್ಯಾಂಕ್ ಸ್ಥಾಪನೆಯಾಗಿತ್ತು. ಈಗ ಈ ಬ್ಯಾಂಕ್ ಸಹ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. 1925 ರಲ್ಲಿ ಮಣಿಪಾಲದಲ್ಲಿ ಟಿಎಂಎ ಪೈ, ವಾಮನ ಶ್ರೀನಿವಾಸ ಕುಡುವ ,ಉಪೇಂದ್ರ ಅನಂತ ಪೈ ,ಇವರ ಪರಿಶ್ರಮದಿಂದ ಸಿಂಡಿಕೇಟ್ ಬ್ಯಾಂಕ್ ಸ್ಥಾಪನೆಯಾಯಿತು. ಉಡುಪಿ ಮಂಗಳೂರಿನ ಭಾಗದಲ್ಲಿ ಸ್ಥಾಪನೆಯಾದಂತಹ ಈ ಬ್ಯಾಂಕ್ ನಾಡಿನ ಮತ್ತು ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿತ್ತು. ನಮ್ಮ ಮೈಸೂರ್ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮತ್ತು ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರ ದೂರದೃಷ್ಟಿತ್ವದಿಂದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ 1913ರಲ್ಲಿ ಅಕ್ಟೋಬರ್ 2ರಂದು ಸ್ಥಾಪನೆಯಾಗಿತ್ತು.

ಈಗ ಈ ಹೆಸರು ಇತಿಹಾಸದ ಪುಟಗಳಲ್ಲಿ ಸೇರಿದೆ. ಕನ್ನಡ ನಾಡಿನ ಹೆಮ್ಮೆಯ ಬ್ಯಾಂಕುಗಳು ಅನ್ಯ ಬ್ಯಾಂಕಿನೊಂದಿಗೆ ವಿಲೀನ ವಾಗಿ ತಮ್ಮ ಹೆಸರುಗಳನ್ನು ಕಳೆದುಕೊಳ್ಳುತ್ತಿದೆ. ಜೊತೆಗೆ ಅಸ್ತಿತ್ವವನ್ನು ಸಹ ಕಳೆದುಕೊಳ್ಳುತ್ತಿವೆ. ಈಗಾಗಲೇ ನಮ್ಮ ನಾಡಿನ ಸ್ವಾತಂತ್ರದ ನಂತರ ಸ್ಥಾಪನೆಯಾದ ಅನೇಕ ಸಾರ್ವಜನಿಕ ಉದ್ಯಮಗಳು , ಲಕ್ಷಾಂತರ ಮಂದಿಗೆ ಬದುಕು ಕೊಟ್ಟಂತಹ ಸಂಸ್ಥೆಗಳು, ಇತಿಹಾಸದ ಪುಟವನ್ನ ಸೇರಿದೆ. ಮುಂದಿನ ದಿನಗಳಲ್ಲಿ ನಮ್ಮ ನಾಡಿನ ಮತ್ತಷ್ಟು ಸಂಸ್ಥೆಗಳು ಏನಾಗುತ್ತದೆ ಎಂಬ ಆತಂಕವು ಕಾಡುತ್ತಿದೆ.

ಅನ್ಯ ಬ್ಯಾಂಕಿನೊಂದಿಗೆ ವಿಲೀನ ಮಾಡುವ ಸಂದರ್ಭದಲ್ಲಿ ನಮ್ಮ ಬ್ಯಾಂಕುಗಳ ಹೆಸರನ್ನು ಪ್ರಧಾನವಾಗಿ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮನಸ್ಸು ಮಾಡುತ್ತಿಲ್ಲ ,ನಮ್ಮ ನಾಡಿನ ಹೆಮ್ಮೆಯ ಬ್ಯಾಂಕುಗಳು ಅನ್ಯ ಬ್ಯಾಂಕಿನೊಂದಿಗೆ ವಿಲೀನವಾಗಿ ತನ್ನ ಇತಿಹಾಸವನ್ನು ಕಳೆದುಕೊಳ್ಳುತ್ತಿದ್ದರು ಅನೇಕರು ಈ ವಿಚಾರದಲ್ಲಿ ಧ್ವನಿಯೇ ತೆಗೆಯುತ್ತಿಲ್ಲವೆಂದು. ಪಿ ಎಂ ಮಾಲತೇಶ್ ನಿರ್ದೇಶಕರು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಕರ್ನಾಟಕ ಸರ್ಕಾರ ಇವರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Author