ಶಿವಮೊಗ್ಗ | ಸಂಸದ ರಾಘವೇಂದ್ರ ವಿರುದ್ಧ ಶಿಕ್ಷಣ ಸಚಿವ ಆಕ್ರೋಶ ಹಾಗೂ ಮತ್ತಷ್ಟು ಸುದ್ದಿಗಳು

ರಾಜಕೀಯ

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಸುಪರ್ದಿಗೆ ವಹಿಸಬೇಕು ಎಂಬ ಸಂಸದ ಬಿ.ವೈ. ರಾಘವೇಂದ್ರ ಅವರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಮಾನ ನಿಲ್ದಾಣ ನಿರ್ಮಿಸಲು ಇವರ ಅಪ್ಪನ ಮನೆಯಿಂದ ದುಡ್ಡು ತಂದಿದ್ದಾರೆಯೇ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ?

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಅನುದಾನ ಹಾಗೂ ರೈತರ ಬೆವರ ಹನಿಯಿಂದ ನಿರ್ಮಾಣವಾಗಿರುವ ಆಸ್ತಿಯನ್ನು ಕೇಂದ್ರ ಸರ್ಕಾರಕ್ಕೆ ಏಕಾಏಕಿ ಒಪ್ಪಿಸಲು ಹೇಗೆ ಸಾಧ್ಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇವರಿಗೆ ಮಾನ ಮರ್ಯಾದೆ ಇದೆಯೇ? ಕರ್ನಾಟಕ ರಾಜ್ಯ ಸರ್ಕಾರದ ಆಸ್ತಿಯನ್ನು ಕೇಂದ್ರಕ್ಕೆ ವಹಿಸಿಬಿಡಬೇಕಂತೆ, ಯಾಕೆ ವಹಿಸಬೇಕು? ಇವರೇನಾದರೂ ಅಪ್ಪನ ಮನೆಯಿಂದ ದುಡ್ಡು ತಂದಿದ್ದಾರಾ? ಇಲ್ಲಿನ ರೈತರು ತಮ್ಮ ರಕ್ತ, ಬೆವರನ್ನು ಸುರಿಸಿ ವಿಮಾನ ನಿಲ್ದಾಣಕ್ಕಾಗಿ ಜಮೀನು ನೀಡಿದ್ದಾರೆ.

ಆ ರೈತರ ಜಮೀನನ್ನು ಕಿತ್ತುಕೊಂಡು, ಹಾಳುಮಾಡಿ ಈಗ ಕೇಂದ್ರಕ್ಕೆ ನೀಡಲು ಹೊರಟಿದ್ದೀರಲ್ಲ, ಈ ವಿಮಾನ ನಿಲ್ದಾಣ ಮಾಡುವ ಮುಂಚೆಯೇ ಈ ವಿಚಾರವನ್ನು ನೀವು ಹೇಳಬೇಕಿತ್ತಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ಶಿಕ್ಷಕರ ನೇಮಕಾತಿ: ಒಂದೆರಡು ದಿನಗಳಲ್ಲಿ ಅಧಿಕೃತ ಅಧಿಸೂಚನೆ

ಶಿವಮೊಗ್ಗ, ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸಲು ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಅಲ್ಲದೆ, ತಮ್ಮ ಇಲಾಖೆಯ ಕಾರ್ಯವೈಖರಿಯನ್ನು ಟೀಕಿಸುವವರಿಗೆ ಇತ್ತೀಚಿನ ಪರೀಕ್ಷಾ ಫಲಿತಾಂಶದ ಮೂಲಕ ರಾಜ್ಯದ ವಿದ್ಯಾರ್ಥಿಗಳೇ ತಕ್ಕ ಉತ್ತರ ನೀಡಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಶಿವಮೊಗ್ಗದಲ್ಲಿಯೇ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಪ್ರಸ್ತುತ ಮಕ್ಕಳು ರಜೆಯ ಮೂಡ್‌ನಲ್ಲಿದ್ದಾರೆ, ಈ ಸಮಯದಲ್ಲಿ ಕಾರ್ಯಕ್ರಮ ಮಾಡಿದರೆ ಎಲ್ಲರೂ ಬೈಯುತ್ತಾರೆ. ಹೀಗಾಗಿ ಎಲ್ಲವನ್ನೂ ಅಚ್ಚುಕಟ್ಟಾಗಿ ರೂಪಿಸಿ, ಶಿವಮೊಗ್ಗದಿಂದ ಇಡೀ ರಾಜ್ಯಕ್ಕೆ ಒಂದು ಒಳ್ಳೆಯ ಸಂದೇಶ ರವಾನಿಸುವ ಹೆಮ್ಮೆ ನಮ್ಮದಾಗಲಿದೆ ಎಂದರು.

ಬಿಎಸ್ ವೈಯನ್ನು ಅಮಿತ್ ಶಾ ಭ್ರಷ್ಡಾಚಾರಿ ಎಂದಿದ್ದರು

ಶಿವಮೊಗ್ಗ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ‘ಅಭಿಮಾನೋತ್ಸವ’ ಕೇವಲ ರಾಜಕೀಯ ಪ್ರೇರಿತ ಕಾರ್ಯಕ್ರಮವಾಗಿದ್ದು, ಇದರ ಹಿಂದೆ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷವನ್ನು ಬಳುವಳಿಯಾಗಿ ನೀಡುವ ‘ಹಿಡನ್ ಅಜೆಂಡಾ’ ಅಡಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಅಟರ್ ಫ್ಲಾಪ್ ಆಗಿದ್ದಾರೆ. ಯಾವುದೇ ಹೋರಾಟವಿಲ್ಲದೆ, ಪುಕ್ಕಟೆಯಾಗಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ.

ಪ್ರಸ್ತುತ ರಾಜ್ಯ ಬಿಜೆಪಿಯಲ್ಲಿ ಐದಾರು ಬಾಗಿಲುಗಳಿದ್ದು (ಬಣಗಳು), ಆ ಪೈಕಿ ಒಂದು ಬಾಗಿಲನ್ನು ಸೃಷ್ಟಿಸಿ ತಮ್ಮ ಮಗನಿಗೆ ರಾಜಕೀಯ ನೆಲೆ ಒದಗಿಸಲು ಯಡಿಯೂರಪ್ಪನವರು ಈ ಇಳಿ ವಯಸ್ಸಿನಲ್ಲಿ ಹೊರಟಿದ್ದಾರೆ. ಇದೇ ಕಾರಣಕ್ಕಾಗಿ ಈ ಅಭಿಮಾನೋತ್ಸವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಟೀಕಿಸಿದರು.

ರಾಜ್ಯದ ಇತಿಹಾಸದಲ್ಲಿ ಮುಖ್ಯಮಂತ್ರಿಯಾದವರು ಯಾರು ಜೈಲಿಗೆ ಹೋಗಿದ್ದರು ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ. ಕೇಂದ್ರ ಸಚಿವ ಅಮಿತ್ ಶಾ ಅವರೇ ಹಿಂದೆ ಯಡಿಯೂರಪ್ಪನವರನ್ನು ಭ್ರಷ್ಟಾಚಾರಿ ಎಂದು ಕರೆದಿದ್ದರು, ಬೇಕಿದ್ದರೆ ಹಳೆಯ ವಿಡಿಯೋಗಳನ್ನು ತೆಗೆದುನೋಡಿ ಎಂದರು.

ಇದೊಂದು ಅಪ್ಪಟ ರಾಜಕೀಯ ಕಾರ್ಯಕ್ರಮವಾಗಿರುವುದರಿಂದ ಯಾವುದೇ ಧರ್ಮದ ಮಠಾಧೀಶರು, ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು. ಭಾಗವಹಿಸಿದರೆ ಸಮಾಜಕ್ಕೆ ಬೇರೆಯದೇ ಆದ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಅವರು ಬಹಿರಂಗವಾಗಿ ಮನವಿ ಮಾಡಿದರು.

ಗೌರವ ಡಾಕ್ಟರೇಟ್ ಪುರಸ್ಕೃತರಾದ ಸಮಾಜವಾದಿ ನಾಯಕ ಕೋಣಂದೂರು ಲಿಂಗಪ್ಪನವರ ಭೇಟಿ-ಅಭಿನಂದನೆ

ಶಿವಮೊಗ್ಗ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪನವರು ಶುಕ್ರವಾರದಂದು ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಹಿರಿಯ ಸಮಾಜವಾದಿ ನಾಯಕರು ಹಾಗೂ ಸ್ವಾತಂತ್ರö್ಯ ಹೋರಾಟಗಾರರಾದ ಕೋಣಂದೂರು ಲಿಂಗಪ್ಪನವರ ಮನೆಗೆ ಭೇಟಿ ನೀಡಿ, ಅಭಿನಂದಿಸಿ, ಹಿರಿಯರೊಂದಿಗೆ ಮಾತನಾಡಿದರು.

ತೀರ್ಥಹಳ್ಳಿ ತಾಲ್ಲೂಕಿನ ಕೋಣಂದರಿನವರಾದ, ಹಿರಿಯ ಸಮಾಜವಾದಿ ನಾಯಕರು ಹಾಗೂ ಸ್ವಾತಂತ್ರö್ಯ ಹೋರಾಟಗಾರರಾಗಿ ಪರಿಚಿತರಾದ ಕೋಣಂದೂರು ಲಿಂಗಪ್ಪನವರಿಗೆ ಕುವೆಂಪು ವಿಶ್ವವಿದ್ಯಾಲಯ 35 ನೇ ಘಟಿಕೋತ್ಸವದಲ್ಲಿ ಘೋಷಿಸಲಾದ ಡಾಕ್ಟರೇಟ್ ಪದವಿ(ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರ)ಯನ್ನು ಶುಕ್ರಮವಾರ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಸಿಂಡಿಕೇಟ್ ಸದಸ್ಯರು, ಇತರೆ ಅಧಿಕಾರಿಗಳು ಅವರ ಮನೆಗೆ ತೆರಳಿ ಪ್ರದಾನ ಮಾಡಿದ ಸಂದರ್ಭದಲ್ಲಿ ಸಚಿವರು ಭೇಟಿ ನೀಡಿ ಹಿರಿಯರೊಂದಿಗೆ ಮಾತನಾಡಿದರು.

ತಮ್ಮಂತಹ ಹಿರಿಯರಿಗೆ ಡಾಕ್ಟರೇಟ್ ಲಭಿಸಿರುವುದು ಅತ್ಯಂತ ಸಂತಸದ ವಿಷಯ. ನಿಮ್ಮನ್ನು ಭೇಟಿ ಮಾಡಿ ಮಾತನಾಡುತ್ತಿರುವುದು ನಮ್ಮ ಪುಣ್ಯ ಎಂದು ಹಿರಿಯರ ಆಶೀರ್ವಾದ ಪಡೆದ ಅವರು, ಇದೇ ಸಮಯದಲ್ಲಿ ತಮ್ಮ ತಂದೆಯವರಾದ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರ ರಾಜಕೀಯ ಜೀವನದ ಘಟನೆಯೊಂದನ್ನು ಸ್ಮರಿಸಿಕೊಂಡು, ಹಿರಿಯರೊಂದಿಗೆ ಹಂಚಿಕೊಂಡರು. ನನ್ನ ತಂದೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.

ಆ ಸಂದರ್ಭದಲ್ಲಿ ಕುವೆಂಪುರವರನ್ನು ಭೇಟಿಯಾಗಿದ್ದರು. ಆ ವೇಳೆ ಕುವೆಂಪುರವರು ಕುಪ್ಪಳಿಯ ತಮ್ಮ ಮನೆಯನ್ನು ನೋಡಬೇಕೆಂಬ ಇಂಗಿತ ವ್ಯಕ್ತಪಡಿಸಿದಾಗ ಬಂಗಾರಪ್ಪನವರು ಖುದ್ದಾಗಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿ, ಅಂದಿನ ಸಚಿವರಾಗಿದ್ದ ಮಲ್ಲಿಕಾರ್ಜುನಯ್ಯ ಹಾಗೂ ಹಾಗೂ ವೈದ್ಯರ ತಂಡದೊಂದಿಗೆ ಕುವೆಂಪುರವರ ಮನೆ ತೋರಿಸಿ, ಅವರನ್ನು ಗೌರವದಿಂದ ಕರೆತಂದಿದ್ದರು,” ಎಂದು ಮಧು ಬಂಗಾರಪ್ಪ ನೆನಪಿಸಿಕೊಂಡರು.

ಅಂದಿನ ದಿನಗಳಲ್ಲಿ ಇದ್ದಂತಹ ಬದ್ಧತೆ ಮತ್ತು ಹಿರಿಯರ ಬಗ್ಗೆ ಇದ್ದ ಗೌರವ ಇಂದು ಮಾದರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ಕೋಣಂದೂರು ಲಿಂಗಪ್ಪನವರು ಶಿಕ್ಷಣ ವ್ಯವಸ್ಥೆ, ಫಲಿತಾಂಶದ ಬಗ್ಗೆ ವಿಚಾರಿಸಿದಾಗ, ಸಚಿವರು, ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ. 94.10 ಫಲಿತಾಂಶ ಪಡೆಯುವ ಮೂಲಕ ಈ ಬಾರಿ ಐತಿಹಾಸಿಕ ಸಾಧನೆ ದಾಖಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿ, ಹಿಂದೆ ಈ ಪ್ರಮಾಣವು ಶೇ. 70-80 ರಷ್ಟಿರುತ್ತಿತ್ತು. ಪೂರಕ ಪರೀಕ್ಷೆಯ ಬದಲಾಗಿ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸುವ ಸರ್ಕಾರದ ಹೊಸ ನೀತಿಯು ವಿದ್ಯಾರ್ಥಿಗಳಿಗೆ ವರದಾನವಾಗಿದೆ.

ಪರೀಕ್ಷೆ ಮುಗಿದ 20 ದಿನಗಳಲ್ಲೇ ಮತ್ತೊಂದು ಅವಕಾಶ ನೀಡುವುದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿದೆ ಎಂದ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದೇ ನಮ್ಮ ಸರ್ಕಾರದ ಗುರಿ ಎಂದು ಸಚಿವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.

ಈ ವೇಳೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಶರತ್ ಅನಂತಮೂರ್ತಿ, ಕುಲ ಸಚಿವರಾದ ಹೇಮಂತ್ ಎನ್, ವಿವಿ ಸಿಂಡಿಕೇಟ್ ಸದಸ್ಯರು, ಇತರೆ ಮುಖಂಡರು, ಜನಪ್ರತಿನಿಧಿಗಳು ಹಾಜರಿದ್ದರು.

Author