ಶಿವಮೊಗ್ಗ | ಅಲ್ಪಸಂಖ್ಯಾತರ ವಾರ್ಡ್‌ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಪ್ರತಿಭಟನೆ

ಶಿವಮೊಗ್ಗ

ಶಿವಮೊಗ್ಗ, ನಗರದ ಅಲ್ಪಸಂಖ್ಯಾತರ ವಾರ್ಡ್‌ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಕಲ್ಪಿಸುವ ಕುರಿತು ಅಲ್ಲಿನ‌ಮುಖಂಡರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮನವಿ, ನಗರದ ಅಲ್ಪಸಂಖ್ಯಾತರು ವಾಸಿಸುವ ಹಲವು ವಾರ್ಡ್‌ಗಳಲ್ಲಿ ಮೂಲಭೂತ ಸೌಲಭ್ಯಗಳ ತೀವ್ರ ಕೊರತೆ ಉಂಟಾಗಿದ್ದು ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ವಿಶೇಷವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ ಸ್ವಚ್ಛತೆ, ಬೀದಿ ದೀಪಗಳು, ರಸ್ತೆ, ಯುಜಿಡಿ ವ್ಯವಸ್ಥೆಗಳು ಸಮರ್ಪಕವಾಗಿ ಇಲ್ಲದಿರುವುದರಿಂದ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೀವ್ರ ತೊಂದರೆ ಉಂಟಾಗಿದೆ.

ಇದರ ಜೊತೆಗೆ, ಪೂರೈಕೆಯಾಗುತ್ತಿರುವ ಕುಡಿಯುವ ನೀರು ಕುಲುಷಿತವಾಗಿ ಬರುತ್ತಿದ್ದು, ಶುದ್ಧವಾಗದೆ ಕೆಂಪು ಬಣ್ಣದ ನೀರು ಬರುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದಾರೆ ಎಂದು ದೂರಿದರು.

ಒಂದು ದಿನ ನೀರು ಬಂದರೆ ಮೂರು ನಾಲ್ಕು ದಿನ ಬರುವುದಿಲ್ಲ. ಈ ನೀರನ್ನು ಕುಡಿಯುವುದರಿಂದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿರುವ ಪರಿಸ್ಥಿತಿಯೂ ಉಂಟಾಗಿದೆ. ಆದ್ದರಿಂದ ಈ ಸಮಸ್ಯೆಯ ಕುರಿತು ಕೂಡ ತಕ್ಷಣ ಗಮನಹರಿಸಿ ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸಬೇಕಾಗಿ ವಿನಂತಿಸಿದರು.

ಚರಂಡಿಗಳ ಸ್ವಚ್ಛತೆ ಸರಿಯಾಗಿ ನಡೆಯದ ಕಾರಣ ಸೊಳ್ಳೆ, ನೊಣ ಹಾಗೂ ಕ್ರಿಮಿ-ಕೀಟಗಳು ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿವಿಧ ರೋಗಗಳು ಉಂಟಾಗುವ ಆತಂಕವಿದೆ. ಮುಂದೆ ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚರಂಡಿ ನಿರ್ವಹಣೆ ಸರಿಯಾಗಿ ಮಾಡದಿದ್ದರೆ ಮಳೆ ನೀರು ಸರಿಯಾಗಿ ಹರಿಯದೆ ಮನೆಗಳೊಳಗೆ ನುಗ್ಗುವ ಸಾಧ್ಯತೆಯೂ ಇದೆ.

ವಿಶೇಷವಾಗಿ ಆರ್.ಎಂ.ಎಲ್ ನಗರ, ಇಲ್ಯಾಸ್ ನಗರ, ಟಿಪ್ಪು ನಗರ, ಹಳೆ ಮಂಡ್ಲಿ, ವಾದಿಹುದಾ, ಸೂಳೇಬೈಲ್ ಹಾಗೂ ಹಳೆ ಶಿವಮೊಗ್ಗ ಸೇರಿದಂತೆ ಅಲ್ಪಸಂಖ್ಯಾತರು ವಾಸಿಸುವ ಎಲ್ಲಾ ವಾರ್ಡ್‌ಗಳಲ್ಲಿ ಮೂಲಭೂತ ಸೌಲಭ್ಯಗಳ ತೀವ್ರ ಕೊರತೆ ಇದೆ ಎಂದರು.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ವಾರ್ಡ್‌ಗಳನ್ನು ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿ, ಶುದ್ಧ ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಬೀದಿ ದೀಪಗಳು, ರಸ್ತೆ, ಯುಜಿಡಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ತುರ್ತುವಾಗಿ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ವಾಹಿದ್ (ಅಡ್ಡು), ರಿಯಾಜ್ ಅಹಮದ್, ಸ್ಟೆಲ್ಲಾ , ಸಂಧ್ಯಾ, ನಜೀರ್ಮೊ ಅಹ್ಮದ್ ಮೊದಲಾದವರಿದ್ದರು.

Author