ಸಾಗರ | ಬಗರ್‌ಹುಕುಂ ಸಾಗುವಳಿ ತೆರವುಗೊಳಿಸದಂತೆ ಅಧಿಕಾರಿಗಳಿಗೆ ಶಾಸಕ ಬೇಳೂರು ಸೂಚನೆ

ರಾಜಕೀಯ

ಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರ ಬಗರ್‌ಹುಕುಂ ಸಾಗುವಳಿ ಭೂಮಿ ತೆರವುಗೊಳಿಸದಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲೆಯ ಕಂದಾಯ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅರಣ್ಯ ಇಲಾಖೆಯಿಂದ ಏಕಾಏಕಿ ರೈತರ ಭೂಮಿ ತೆರವು ಪ್ರಕರಣಗಳ ವಿರುದ್ಧ ವ್ಯಾಪಕ ದೂರುಗಳು ಕೇಳಿಬಂದಿವೆ.ರೈತರ ಪರವಾದ ಸರ್ಕಾರವಿರುವಾಗ ಅರಣ್ಯ ಇಲಾಖೆ ರೈತರಿಗೆ ಕಿರುಕುಳ ನೀಡಬಾರದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರಲ್ಲದೆ, ಪ್ರಸ್ತುತ ಗಾಳಿ ಮಳೆಗೆ ಶಾಲಾ ಕಾಲೇಜುಗಳ ಪಕ್ಕದಲ್ಲಿ ಹಾಗೂ ಮನೆಗಳ ಪಕ್ಕದಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು ಎಂದು ಸಭೆಯಲ್ಲಿ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪ್ರತಿಕ್ರಿಯಿಸಿ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಂದಾಯ ಭೂಮಿ ಹಾಗೂ ಅರಣ್ಯ ಭೂಮಿಯ ಜಂಟೀ ಸರ್ವೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಯವರು ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಕಾರ್ಮಿಕ ವಸತಿ ಶಾಲೆ ಮಂಜೂರಾತಿಯಾಗಿದ್ದು, ಸದರಿ ವಸತಿ ಶಾಲೆಗೆ ಕಂದಾಯ ಇಲಾಖೆಯ ಜಾಗವನ್ನು ಕೂಡಲೇ ಗುರುತು ಮಾಡಿ, ಮಂಜೂರಾತಿ ನೀಡಲು ಜಿಲ್ಲಾಧಿಕಾರಿಯವರು ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್‌ರವರಿಗೆ ಸೂಚಿಸಿದರು.

ಸಾಗರ ವಿಧಾನಸಭಾ ಕ್ಷೇತ್ರಕ್ಕೆ ೧೧೦/೧೧ ಕೆವಿ ವಿದ್ಯುತ್ ಉಪಕೇಂದ್ರಗಳನ್ನು (ಗ್ರಿಡ್) ಸ್ಥಾಪಿಸಲು ಸರ್ಕಾರಿ ಜಮೀನನ್ನು ಮಂಜೂರು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಡಿ.ಎಫ್.ಒ, ಶಿವಮೊಗ್ಗ,ಡಿ.ಎಫ್.ಒ ಸಾಗರ,,ಉಪವಿಭಾಗಾಧಿಕಾರಿಗಳು ಸಾಗರ,ತಹಶೀಲ್ದಾರ್. ಹೊಸನಗರ,,ಎ.ಸಿ.ಎಫ್ ಹೊಸನಗರ.,ಮೈನ್ಸ್ ಡಿ.ಡಿ,ಆರ್. ಎಫ್.ಒ ಗಳು ಉಪಸ್ಥಿತರಿದ್ದರು.

Author