ಹೊಸನಗರ, ಆಕರ್ಷಕ ಬಹುಮಾನ ಹಾಗೂ ಸ್ಕೀಮ್‌ಗಳ ಹೆಸರಿನಲ್ಲಿ ಸಾರ್ವಜನಿಕರಿಗೆ ಕೋಟ್ಯಾಂತರ ರೂಪಾಯಿ ಹಣ ವಂಚಿಸಿದ ಆರೋಪದಡಿ ಉದ್ಯಮಿ ಅಬ್ದುಲ್ ರಜಾಕ್ ಎಂಬುವವರನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ . ಹೊಸನಗರದ ನಿಖಿಲ್ ಎಂಬುವವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಆರೋಪಿಗಳಾದ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ಅವರು 13, 16, ಮತ್ತು 21 ತಿಂಗಳ ವಿವಿಧ ಸ್ಕೀಮ್‌ಗಳನ್ನು ಪರಿಚಯಿಸಿದ್ದರು .
ಪ್ರತಿ ತಿಂಗಳು 1,000 ರೂ. ಪಾವತಿಸಿದರೆ ಸ್ಕೀಮ್ ಮುಕ್ತಾಯದ ನಂತರ ಗೃಹೋಪಯೋಗಿ ವಸ್ತುಗಳು ಹಾಗೂ ಆಕರ್ಷಕ ಬಹುಮಾನ ನೀಡುವುದಾಗಿ ಜನರನ್ನು ನಂಬಿಸಿದ್ದರು.
ದೂರುದಾರ ನಿಖಿಲ್ ಅವರು ಸುಮಾರು 150 ಕಾರ್ಡುದಾರರನ್ನು ಸಂಪರ್ಕಿಸಿ ಅವರಿಂದ ಸಂಗ್ರಹಿಸಿದ 24 ಲಕ್ಷ ರೂಪಾಯಿಯನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿದ್ದರು. ಆದರೆ, ಮೇ 2025ಕ್ಕೆ ಸ್ಕೀಮ್ ಮುಕ್ತಾಯವಾದರೂ ಭರವಸೆ ನೀಡಿದಂತೆ ಯಾವುದೇ ವಸ್ತುಗಳನ್ನಾಗಲೀ ಅಥವಾ ಹಣವನ್ನಾಗಲೀ ಹಿಂತಿರುಗಿಸದೆ ಆರೋಪಿಗಳು ಸತಾಯಿಸುತ್ತಿದ್ದರು ಎನ್ನಲಾಗಿದೆ.
ಇವರಂತೆಯೇ ಸುಮಾರು 7-8 ಜನ ಏಜೆಂಟರುಗಳು 1960ಕ್ಕೂ ಹೆಚ್ಚು ಜನರಿಂದ ಸುಮಾರು 3 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿ ಪಾವತಿಸಿದ್ದರು. ಆದರೆ ಅವರ್ಯಾರಿಗೂ ಸಹ ಯಾವುದೇ ಬಹುಮಾನವನ್ನು ನೀಡಲಿಲ್ಲ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆ ತಕ್ಷಣ ಹೊಸನಗರ ಪಿಎಸ್‌ಐ ಮತ್ತು ಸಿಬ್ಬಂದಿಗಳ ತಂಡ ಕಾರ್ಯಪ್ರವೃತ್ತರಾಗಿ ಉಡುಪಿ ಮೂಲದ ಅಬ್ದುಲ್ ರಜಾಕ್‌ನನ್ನು ವಶಕ್ಕೆ ಪಡೆದಿದೆ.



