ಬೆಂಗಳೂರು/ಶಿವಮೊಗ್ಗ, ರಾಜ್ಯ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ವ್ಯಾಪಕವಾಗಿ ವರದಿಯಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಉಂಟಾಗಿರುವ ಮರಳು ಕೃತಕ ಅಭಾವ ಮತ್ತು ಹರಾಜು ಪ್ರಕ್ರಿಯೆಯ ವಿಳಂಬದ ಗಂಭೀರ ಸಮಸ್ಯೆಯನ್ನು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನದ ಕಾರ್ಯಪಟ್ಟಿಯಲ್ಲಿ ಒಳಪಡಿಸಲಾಗಿದ್ದರೂ, ಸಮಯಾಭಾವ ಹಾಗೂ ವಿಧೇಯಕಗಳ ಅಂಗೀಕಾರದ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಸಭೆಯಲ್ಲಿ ಚರ್ಚಿಸಲು ಅವಕಾಶ ದೊರೆಯಲಿಲ್ಲ ಎಂದು ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ತಿಳಿಸಿದ್ದಾರೆ.
ಈ ವಿಷಯ ಕಾರ್ಯಪಟ್ಟಿಯಲ್ಲಿ ದಾಖಲೆಯಾಗಿರುವುದರಿಂದ ಸರ್ಕಾರದಿಂದ ಸಮಗ್ರ ಉತ್ತರ ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ 01/07/2025ರಂದು 20 ಮರಳು ಬ್ಲಾಕ್‌ಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಇನ್ನೂ ಅಧಿಕೃತ ಮರಳುಗಾರಿಕೆ ಪ್ರಾರಂಭವಾಗದಿರುವುದು ಅತ್ಯಂತ ಗಂಭೀರ ಸಂಗತಿ ಎಂದು ಮಾನ್ಯ ಶಾಸಕರು ಅಭಿಪ್ರಾಯಪಟ್ಟರು.
ಗುತ್ತಿಗೆದಾರರು ಕೋಟ್ಯಂತರ ರೂಪಾಯಿ ಇ.ಎಂ.ಡಿ ಹಾಗೂ ಬ್ಯಾಂಕ್ ಗ್ಯಾರಂಟಿ ಸೇರಿದಂತೆ ಮುಂಗಡ ಹಣ ಪಾವತಿಸಿದ್ದರೂ, ಅಗತ್ಯ ಎನ್.ಒ.ಸಿ (NOC)ಗಳ ವಿಳಂಬದಿಂದ ಕಾರ್ಯಾರಂಭಕ್ಕೆ ಅವಕಾಶ ಸಿಗದೇ ಇರುವುದನ್ನು ಖಂಡಿಸಿದರು.
ಈ ವಿಳಂಬದಿಂದ ಜಿಲ್ಲೆಯಲ್ಲಿ ಮರಳಿನ ಕೃತಕ ಅಭಾವ ಉಂಟಾಗಿ, ಮರಳು ಮಾಫಿಯಾ ಅಕ್ರಮವಾಗಿ ದುಪ್ಪಟ್ಟು ದರದಲ್ಲಿ ಮಾರಾಟ ನಡೆಸುತ್ತಿರುವುದು ಜನಸಾಮಾನ್ಯರ ಮೇಲೆ ಭಾರೀ ಹೊರೆ ತಂದಿದೆ. ಮನೆ ನಿರ್ಮಾಣ ಹಾಗೂ ಸಾರ್ವಜನಿಕ ಕಾಮಗಾರಿಗಳು ಸ್ಥಗಿತಗೊಂಡು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಡಿ. ಎಸ್. ಅರುಣ್ ಅವರು ವಿಷಾದಿಸಿದರು.
ಸಕಾಲದಲ್ಲಿ ಮರಳುಗಾರಿಕೆ ಆರಂಭವಾಗಿದ್ದರೆ ಸರ್ಕಾರಕ್ಕೆ ಸುಮಾರು 40 ಕೋಟಿ ರೂಪಾಯಿ ಆದಾಯ ಲಭ್ಯವಾಗಬಹುದಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ತಕ್ಷಣವೇ ಬಾಕಿ ಇರುವ ಎಲ್ಲಾ ಎನ್.ಒ.ಸಿ ಮಂಜೂರು ಮಾಡಿ, ಹರಾಜಾದ ಮರಳು ಬ್ಲಾಕ್‌ಗಳಲ್ಲಿ ಕಾರ್ಯಾರಂಭಕ್ಕೆ ಅವಕಾಶ ಕಲ್ಪಿಸಬೇಕು. ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಜನರಿಗೆ ನಿಗದಿತ ದರದಲ್ಲಿ ಮರಳು ಲಭ್ಯವಾಗುವಂತೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಡಿ.ಎಸ್. ಅರುಣ್ ಅವರು ಗಣಿ ಮತ್ತು ಭೂ ವಿಜ್ಞಾನ ಸಚಿವರನ್ನು ಒತ್ತಾಯಿಸಿದ್ದಾರೆ.



