ಬಜೆಟ್ ; ಮಾತಿಗೆ ತಪ್ಪಿಲ್ಲ, ಭರವಸೆಯಂತೆ ನಡೆ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಅಭಿಪ್ರಾಯ

ಶಿವಮೊಗ್ಗ

ಶಿವಮೊಗ್ಗ, ಸಿಎಂ ಸಿದ್ದರಾಮಯ್ಯ ೧೭ ನೆಯ ಸಲ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದಾರೆ. ಬಜೆಟ್‌ನಲ್ಲಿ ಎಲ್ಲಾ ವರ್ಗದವರಿಗೆ ಕೊರತೆಯಾಗದಂತೆ ಪಂಚ ಗ್ಯಾರಂಟಿಗಳಗೆ ಅನುದಾನ ನೀಡಿ, ಭರವಸೆಯಂತೆ ನಡೆದುಕೊಂಡಿದ್ದಾರೆ. ಮಾತಿಗೆ ತಪ್ಪಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಹಲವು ರಾಜ್ಯಗಳು ಗ್ಯಾರಂಟಿ ಘೋಷಣೆ ಮಾಡಿದ್ದವು. ಆದರೆ ಒಂದೇ ವರ್ಷದಲ್ಲೇ ಅದನ್ನು ನಿಲ್ಲಿಸಿದ್ದಾರೆ. ಆದರೆ ಸಿದ್ಧರಾಮಯ್ಯ ಸರ್ಕಾರ ಅದನ್ನು ಯಶಸ್ವಿಯಾಗಿ ಪೂರೈಸಿದೆ. ಪ್ರತಿವರ್ಷಕ್ಕೆ ೫೦ ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಬೇರೆ ಬೇರೆ ಇಲಾಖೆಗೆ ಸಾಕಷ್ಟು ಅನುದಾನವನ್ನು ಕೂಡ ನೀಡಿದೆ. ವಿಶೇಷವೆಂದರೆ, ಈ ಬಜೆಟ್‌ನಲ್ಲಿ ೫೪ ಸಾವಿರ ಹುದ್ದೆ ಭರ್ತಿಮಾಡುವ ಪ್ರಸ್ತಾಪವಿದೆ.

ಶಿಕ್ಷಣ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿದ್ದು, ೮೦೦ ಕಪಿಎಸ್ ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. ಅದಕ್ಕಾಗಿ ೩೯೦೦ ಕೋಟಿ ರೂ. ಹಣ ನಿಗದಿಪಡಿಸಲಾಗಿದ್ದು, ಏಪ್ರಿಲ್ ತಿಂಗಳನಲ್ಲಿ ರಾಜ್ಯಾದ್ಯಂತ ನಿರ್ಮಾಣವಾಗುವ ಕೆಪಿಎಸ್ ಶಾಲೆಗೆ ಮುಖ್ಯಮಂತ್ರಿಗಳೇ ಶಿವಮೊಗ್ಗದಿಂದ ಚಾಲನೆ ನೀಡಲಿದ್ದಾರೆ ಎಂದರು.

ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರನ್ನು ಇಡುವುದರ ಮೂಲಕ ಸಿದ್ಧರಾಮಯ್ಯನವರು ಸಾಮಾಜಿಕ ಚಳವಳಿಯ ಬದ್ಧತೆಯನ್ನು ಎತ್ತಿಹಿಡಿದಿದ್ದಾರೆ. ಬಡವರಿಗೆ, ರೈತರಿಗೆ ೩೦,೦೦೦ಕೋಟಿ ಬಡ್ಡಿರಹಿತ ಸಾಲಕ್ಕೆ ಮೀಸಲಿಡಲಾಗಿದೆ.

ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿಲ್ಲ. ರೈತರ ಬೆಳೆಗೆ ಒಳ್ಳೆಯ ಬೆಲೆಯನ್ನೂ ನೀಡಿಲ್ಲ. ಅಡುಗೆ ಅನಿಲ ಸಿಲಿಂಡರ್ ಗೆ ಇಂದಿನಿಂದ ಕೇಂದ್ರ ೬೦ ರೂ. ಜಾಸ್ತಿ ಮಾಡಿದೆ. ಜಿಎಸ್‌ಟಿ ದರವನ್ನು ಇಳಿಸಿ ಅದರಿಂದಲೂ ರಾಜ್ಯ ಸರ್ಕಾರಕ್ಕೆ ೧೦ ಸಾವಿರ ಕೋಟಿ ರೂ. ನಷ್ಟವಾಗಿದೆ. ಒಟ್ಟಾರೆ ರಾಜ್ಯದ ಆದಾಯದಲ್ಲಿ ಜಿಎಸ್‌ಟಿಯಿಂದ ಶೇ.೫೩ರಷ್ಟು ಬರಬೇಕಾಗಿದ್ದು, ೨೦೨೫-೨೦೨೬ನೇ ಸಾಲಿನ ಆ ಪ್ರಮಾಣ ಕೂಡ ಕಡಿಮೆಯಾಗಿದ್ದು, ಸುಮಾರು ೧೫,೦೦೦ ಕೋಟ ರಾಜ್ಯ ಸರ್ಕಾರಕ್ಕೆ ನಷ್ಟವಾಗಿದೆ ಎಂದರು.

ಶಿವಮೊಗ್ಗದ ಕೆಲವೊಂದು ಪ್ರಸ್ತಾವನೆಗಳು ಈಡೇರಲು ಬಾಕಿಯಿದೆ. ಮೆಗ್ಗಾನ್ ಜಿಲ್ಲಾ ಆಸ್ಪತ್ರೆ, ಜಿಲ್ಲಾಡಳಿತ ಭವನ ಇವೆಲ್ಲವೂ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಸಿಎಂ ಗಮನಕ್ಕೆ ತಂದಿದ್ದಾರೆ. ಅಧಿಕೃತವಾಗಿ ಸಿಎಂ ಏಪ್ರಿಲ್‌ನಲ್ಲಿ ಶಿವಮೊಗ್ಗಕ್ಕೆ ಬಂದಾಗ ಘೋಷಣೆ ಮಾಡಲಿದ್ದಾರೆ ಎಂದರು.

ಪ್ರಮುಖರಾದ ಕಲಗೋಡು ರತ್ನಾಕರ್, ಹಾಲಪ್ಪ, ಜಿ.ಡಿ. ಮಂಜುನಾಥ್, ಶಿವಕುಮಾರ್, ಶಿವಣ್ಣ, ಜಿ. ಪದ್ಮನಾಬ್, ಸೈಯದ್ ವಾಹಿದ್ ಅಡ್ಡು, ಶಿ.ಜು. ಪಾಷಾ ಇದ್ದರು.

Author