ಶಿವಮೊಗ್ಗ | ಸಾಮಾಜಿಕ ಜಾಲತಾಣದ ಜಾಹೀರಾತು ನಂಬಿ 61 ಲಕ್ಷ ರೂ. ಕಳೆದುಕೊಂಡ!

ಶಿವಮೊಗ್ಗ

ಶಿವಮೊಗ್ಗ, ನಗರದ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನಂಬಿ ಬರೋಬ್ಬರಿ 61 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.

ಈ ವಂಚನೆಯ ಕುರಿತು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ವಿವರ

ಸಂತ್ರಸ್ತರು ಫೇಸ್‌ಬುಕ್ ಬಳಸುತ್ತಿದ್ದಾಗ LF Work ಎಂಬ ಹೆಸರಿನ ಕಂಪನಿಯ ಜಾಹೀರಾತು ಕಾಣಿಸಿಕೊಂಡಿದೆ. ಅದರಲ್ಲಿ ಚಿನ್ನ ಮತ್ತು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಲಾಗಿತ್ತು. ಈ ಆಮಿಷಕ್ಕೆ ಒಳಗಾದ ವ್ಯಕ್ತಿ, ವಂಚಕರು ನೀಡಿದ ಲಿಂಕ್ ಮೂಲಕ ಮೊಬೈಲ್ ಅಪ್ಲಿಕೇಶನ್ ಒಂದನ್ನ ಡೌನ್‌ಲೋಡ್ ಮಾಡಿಕೊಂಡಿದ್ದರು.

ಅಪ್ಲಿಕೇಶನ್ ಇನ್‌ಸ್ಟಾಲ್ ಆದ ಕೂಡಲೇ ಅವರನ್ನು ‘LG(LF-work)4988 Official Group’ ಎಂಬ ವಾಟ್ಸಾಪ್ ಗುಂಪಿಗೆ ಸೇರಿಸಲಾಗಿದೆ. ಆಪ್‌ನಲ್ಲಿ ಕೇಳಲಾದ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಭರ್ತಿ ಮಾಡಿದ ನಂತರ, ವಂಚಕರು ಅವರಿಗೆ ವಿವಿಧ ಯುಪಿಐ (UPI) ಐಡಿಗಳನ್ನು ನೀಡಿ ಹಣ ವರ್ಗಾಯಿಸುವಂತೆ ಕೋರಲಾಗಿತ್ತು. ಅದನ್ನು ನಂಬಿದ ವ್ಜಕ್ತಿ ಹಣವನ್ನು ಹಾಕಲು ಮುಂದಾಗಿದ್ದಾರೆ.

ಆಶ್ಚರ್ಯವೆಂದ್ರೆ ಸಂತ್ರಸ್ತರು ಹಣ ಪಾವತಿಸಿದ ತಕ್ಷಣವೇ ಆ ಯುಪಿಐ ಐಡಿಗಳನ್ನು ಡಿಲೀಟ್ ಮಾಡಲಾಗುತ್ತಿತ್ತು. ಹಂತ ಹಂತವಾಗಿ ಒಟ್ಟು 61 ಲಕ್ಷ ರೂಪಾಯಿಗಳನ್ನು ಸಂತ್ರಸ್ತರಿಂದ ವರ್ಗಾಯಿಸಿಕೊಳ್ಳಲಾಗಿದೆ.

ಲಾಭಾಂಶವೂ ಇಲ್ಲದೆ, ಅಸಲು ಹಣವೂ ವಾಪಸ್ ಬಾರದೇ ಇದ್ದಾಗ ತಾವು ವಂಚನೆಗೆ ಒಳಗಾಗಿರುವುದು ವ್ಯಕ್ತಿಗೆ ತಿಳಿದಿದ್ದು ಸೈಬರ್​ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

Author