ಶಿವಮೊಗ್ಗ, ಯುವಕನಿಗೆ ಮೆಗ್ಗಾನ್ ಆಸ್ಪತ್ರೆ ಎದುರೇ ಅವನ ಸಂಬಂಧಿಕರು ಹಲ್ಲೆ ನಡಸಿದ ಘಟನೆ ವರದಿಯಾಗಿದೆ.ಹೊನ್ನಾಳಿ ತಾಲೂಕಿನ ಶಾಂತ ಕುಮಾರ್ ಎಂಬುವವರು ತಮ್ಮ ತಾಯಿ ವಿಷ ಸೇವಿಸಿದ್ದರಿಂದ ಚಿಕಿತ್ಸೆ ಕೊಡಿಸಲು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಶಾಂತ ಕುಮಾರ್ ಅವರು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಹೊರಗೆ ನಿಂತಿದ್ದಾಗ, ಅವರ ಸಂಬಂಧಿಕರು ಅಲ್ಲಿಗೆ ಬಂದಿದ್ದಾರೆ.
ಆಸ್ತಿ ವಿಚಾರದ ಹಳೆ ದ್ವೇಷದ ಹಿನ್ನೆಲೆ ಮತ್ತು ತಾಯಿಯ ಅನಾರೋಗ್ಯದ ವಿಷಯ ತಮಗೆ ತಿಳಿಸಿಲ್ಲ ಎಂಬ ಕಾರಣಕ್ಕೆ ಶಾಂತ ಕುಮಾರ್ ಅವರೊಂದಿಗೆ ಜಗಳ ತೆಗೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಅಲ್ಲೇ ಬಿದ್ದಿದ್ದ ಜೆಲ್ಲಿ ಕಲ್ಲಿನಿಂದ ಶಾಂತ ಕುಮಾರ್ ಅವರ ತಲೆಗೆ ಹೊಡೆದು ರಕ್ತಗಾಯ ಮಾಡಿ ಬೀಳಿಸಿದ್ದಾರೆ. ಅಷ್ಟೇ ಅಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



