ಶಿವಮೊಗ್ಗ | ಉಡಾನ್ ಸೇವೆ ಮುಕ್ತಾಯ: 3-4 ತಿಂಗಳಲ್ಲಿ ಮತ್ತೆ ವಿಮಾನ ಹಾರಾಟ ಆರಂಭ : ನಂಜಯ್ಯನಮಠ

ಶಿವಮೊಗ್ಗ

ಶಿವಮೊಗ್ಗ,ಉಡಾನ್ ಯೋಜನೆಯ ಒಪ್ಪಂದದ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ಮುಂದಿನ 3 ರಿಂದ 4 ತಿಂಗಳಲ್ಲಿ ಮತ್ತೆ ವಿಮಾನಯಾನ ಸೇವೆಯನ್ನು ಆರಂಭಿಸಲು ಸತತ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೆ.ಎಸ್.ಐ.ಐ.ಡಿ.ಸಿ. ಅಧ್ಯಕ್ಷರಾದ ನಂಜಯ್ಯನಮಠ ತಿಳಿಸಿದರು.

ಗುರುವಾರ ಬೆಳಿಗ್ಗೆ ನಗರದ ಹೊರವಲಯದ ಹೋಟೆಲ್ ಮಲೆನಾಡ್‌ಶೈರ್‌ನಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಯುಡಿಎಎನ್ (UDAN) ಚೌಕಟ್ಟಿನಡಿಯಲ್ಲಿ ದೊರೆಯುತ್ತಿದ್ದ ವಿಜಿಎಫ್ ಸೌಲಭ್ಯವು ಮುಕ್ತಾಯಗೊಳ್ಳುತ್ತಿರುವುದರಿಂದ, ಏರ್‌ಲೈನ್ ಆಪರೇಟರ್ 2026 ರ ನವೆಂಬರ್ 21 ರಿಂದ ಈ ಸೇವೆಗಳನ್ನು ನಿಲ್ಲಿಸಲು ಪ್ರಸ್ತಾಪಿಸಿದೆ. ಇದರಿಂದ ಶಿವಮೊಗ್ಗ ವಿಮಾನ ನಿಲ್ದಾಣವು ನಿಗದಿತ ವಾಣಿಜ್ಯ ವಿಮಾನ ಸಂಚಾರವಿಲ್ಲದೆ ಹಿಂದುಳಿದ ವಿಮಾನ ನಿಲ್ದಾಣದ (underserved airport) ಸ್ಥಿತಿಗೆ ಜಾರುವ ಆತಂಕವಿದೆ .

ಸರ್ಕಾರದ ವಿಶೇಷ ಮನವಿ:

ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಕ ಮಲೆನಾಡು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ (ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ, ಹಾವೇರಿ ಇತ್ಯಾದಿ) ಆರ್ಥಿಕ, ಪ್ರವಾಸೋದ್ಯಮ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ವಿಮಾನ ಸಂಪರ್ಕ ಅತ್ಯಗತ್ಯವಾಗಿದೆ. ಮಾರ್ಪಡಿಸಿದ ಆರ್ ಸಿ ಎಸ್-ಉಡಾನ್ 6.0 ಯೋಜನೆಯಡಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಪ್ರಸ್ತಾಪಿಸಲಾಗಿರುವ 13 ಹೊಸ ಮಾರ್ಗಗಳನ್ನು ವಿಶೇಷ ಪರಿಗಣನೆಗೆ ತೆಗೆದುಕೊಳ್ಳುವಂತೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕೋರಲಾಗಿದೆ.

ಉಡಾನ್ ಯೋಜನೆಯಡಿ ವಿಮಾನಯಾನ ಸೇವೆ ಒದಗಿಸಲು ಮಾಡಿಕೊಂಡಿದ್ದ 3 ವರ್ಷಗಳ ಒಪ್ಪಂದದ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಶಿವಮೊಗ್ಗ, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಸೇರಿದಂತೆ ಹಲವು ಕಡೆಗಳಲ್ಲಿ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಕೆಲವೆಡೆ ಪೂರ್ಣ ಸ್ಥಗಿತಗೊಂಡಿದ್ದು ಒಪ್ಪಂದ ಮುಂದುವರೆಸಲು ಕ್ರಮ ವಹಿಸಲಾಗುತ್ತಿದೆ.ಕೇಂದ್ರಕ್ಕೆ ಮನವಿ ಹಾಗೂ ಸಂಸದರ ಗಮನಕ್ಕೆವಿಮಾನಯಾನ ಸೇವೆಯನ್ನು ಮುಂದುವರಿಸಲು ಮತ್ತು ಒಪ್ಪಂದದ ಅವಧಿಯನ್ನು ವಿಸ್ತರಿಸಲು ರಾಜ್ಯ ಸರ್ಕಾರದ ವತಿಯಿಂದ ಸಂಬಂಧಪಟ್ಟ ಕೇಂದ್ರ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.

ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಶೇ.80 ಹಾಗೂ ರಾಜ್ಯ ಸರ್ಕಾರದ ಶೇ.20 ಪಾಲುದಾರಿಕೆ ಇರುವ ಕಾರಣ ಕೇಂದ್ರದ ಅನುಮತಿಗಾಗಿ ಎದುರು ನೋಡಲಾಗುತ್ತಿದೆ. ಪ್ರಯಾಣಿಕರಿಗೆ ಆಗುತ್ತಿರುವ ಅನಾನುಕೂಲತೆಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದ್ದು, ಈ ವಿಚಾರವನ್ನು ಸಂಸದರ ಗಮನಕ್ಕೂ ತರಲಾಗಿದೆ. ಸಂಸದರು ಕೂಡ ಈ ಬಗ್ಗೆ ಆಸಕ್ತಿ ತೋರಿದ್ದಾರೆ ಎಂದರು.

ನೈಟ್ ಲ್ಯಾಂಡಿಂಗ್ ಮತ್ತು ಕ್ಯಾಲಿಬ್ರೇಷನ್ ಪ್ರಕ್ರಿಯೆವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್ ಕಾಮಗಾರಿಗಳು ಶೇಕಡಾ 95 ರಷ್ಟು ಪೂರ್ಣಗೊಂಡಿದ್ದು, ಉಳಿದ ಸಣ್ಣಪುಟ್ಟ ಕೆಲಸಗಳು ಕೆಲವೇ ತಿಂಗಳುಗಳಲ್ಲಿ ಮುಕ್ತಾಯಗೊಳ್ಳಲಿವೆ. ಫ್ಲೈಟ್ ಕ್ಯಾಲಿಬ್ರೇಷನ್‌ಗಾಗಿ ಬೆಂಗಳೂರಿನಿಂದ ವಿಶೇಷ ವಿಮಾನ ಆಗಮಿಸಲಿದ್ದು, ತಜ್ಞರ ತಂಡ ಕ್ಯಾಲಿಬ್ರೇಷನ್ ನಡೆಸಿ ವರದಿ ನೀಡಲಿದೆ. ಆ ಬಳಿಕ ಸರ್ಕಾರಕ್ಕೆ ವರದಿ ಸಮರ್ಪಿಸಿ ಕಮಿಷನಿಂಗ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ನೌಕರರು ಮತ್ತು ರೈತರ ಹಿತರಕ್ಷಣೆವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ 80 ಜನ ನೌಕರರನ್ನು ಕೆಲಸದಲ್ಲಿ ಮುಂದುವರಿಸಲಾಗುತ್ತಿದ್ದು, ಅವರಿಗೆ ನಿಯಮಿತವಾಗಿ ವೇತನ ನೀಡಲಾಗುತ್ತಿದೆ. ಅಲ್ಲದೆ, ವಿಮಾನ ನಿಲ್ದಾಣಕ್ಕಾಗಿ ಭೂಮಿ ನೀಡಿದ ರೈತರಿಗೂ ಪರಿಹಾರ ನೀಡಲು ಅಗತ್ಯ ಕ್ರಮ ವಹಿಸಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಆಡಳಿತಾತ್ಮಕ ತೊಂದರೆಗಳೇನೂ ಇಲ್ಲ, ಆದಷ್ಟು ಶೀಘ್ರವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ನಂಜಯ್ಯನಮಠ ಭರವಸೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಯೋಗೇಶ್, ವಿಮಾನ ನಿಲ್ದಾಣ ನಿರ್ದೇಶಕ ಶಮಂತ್ ಹಾಗೂ ಕೆ.ಎಸ್.ಐ.ಎಸ್.ಎಫ್. ಸಹಾಯಕ ಕಮಾಂಡೆಂಟ್ ಶಶಿಕುಮಾರ್ ನಾಯ್ಕ್ ಉಪಸ್ಥಿತರಿದ್ದರು.

Author