ಶಿವಮೊಗ್ಗ | ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಉದ್ಘಾಟನೆ ; ವಿಜ್ಞಾನದ ಪ್ರಯೋಗ-ತರ್ಕಬದ್ಧ ಆಲೋಚನೆಯಿಂದ ಹೊಸತನ ಕಲಿಯಿರಿ: ಸುಜಾತ ಕೆ.ಆರ್.

ಶಿವಮೊಗ್ಗ

ಶಿವಮೊಗ್ಗ,ನ,ಸೃಷ್ಟಿ ಒಂದು ಕೌತುಕವಾಗಿದ್ದು ಇದರ ಹಿಂದೆ ಇರುವ ವೈಜ್ಞಾನಿಕ ಸತ್ಯವನ್ನು ಮಕ್ಕಳು ತಿಳಿಯಬೇಕು ಹಾಗೂ ವಿಜ್ಞಾನದ ಪ್ರಯೋಗಗಳು ಮತ್ತು ತರ್ಕಬದ್ಧ ಆಲೋಚನೆಗಳ ಮೂಲಕ ಹೊಸ ವಿಷಯಗಳನ್ನು ಕಲಿಯಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸುಜಾತ ಕೆ ಆರ್ ತಿಳಿಸಿದರು.ನಗರದ ಕೋಟೆ ರಸ್ತೆಯ ವಾಸವಿ ಶಾಲೆ ಹತ್ತಿರವಿರುವ ವೇದಿಕ್ ಎಕ್ಸ್‌ಪರ್ಟ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ (NCSC) ಹಾಗೂ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದು ವಿಶೇಷವಾಗಿ ಹೈಸ್ಕೂಲ್ ಮಕ್ಕಳಿಗಾಗಿ ಆಯೋಜಿಸಲಾದ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ರಕೃತಿಯಲ್ಲಿ ಮತ್ತು ನಮ್ಮ ಸುತ್ತಮುತ್ತ ನಡೆಯುವ ಪ್ರತಿಯೊಂದು ಘಟನೆಗಳ ಹಿಂದೆ ನಿರ್ದಿಷ್ಟವಾದ ಕಾರಣಗಳಿರುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಈ ಕಾರಣಗಳನ್ನು ತಿಳಿದುಕೊಂಡು ಜೀವನವನ್ನು ಉತ್ತಮಪಡಿಸಿಕೊಳ್ಳಬಹುದು. ಇಂದಿನ ಮಕ್ಕಳು ವಿಜ್ಞಾನದ ಪ್ರಯೋಗಗಳು ಮತ್ತು ತರ್ಕಬದ್ಧ ಆಲೋಚನೆಗಳ ಮೂಲಕ ಹೊಸ ವಿಷಯಗಳನ್ನು ಕಲಿಯಬೇಕು. ಇದರಿಂದ ಅವರಲ್ಲಿ ಸೃಜನಶೀಲತೆ ಮತ್ತು ಅನ್ವೇಷಣಾ ಮನೋಭಾವ ಹೆಚ್ಚಾಗುತ್ತದೆ ಎಂದರು.

ಕೆಎಸ್ ಸಿ ಎಸ್ ಟಿ ವೀಕ್ಷಕರಾದ ಗಂಗಾಧರಪ್ಪತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ಉತ್ತಮ ಯೋಜನೆಗಳು ಹಾಗೂ ಪ್ರಾಜೆಕ್ಟ್‌ಗಳನ್ನು ರೂಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.ಪಂಚ ಸೂತ್ರಗಳು (5 R’s): ತ್ಯಾಜ್ಯ ನಿರ್ವಹಣೆಯಲ್ಲಿ ಪ್ರಮುಖವಾಗಿ 5 ಅಂಶಗಳನ್ನು ಅಳವಡಿಸಿಕೊಳ್ಳಬೇಕಿದೆ. ರಿ ಯೂಸ್ (ಮರುಬಳಕೆ) ರಿಸೈಕಲ್ (ಮರುಪಡೆಯುವಿಕೆ) ರಿಡಿಸೈನ್ (ಮರು ವಿನ್ಯಾಸ) ರಿಯುಟಿಲೈಸೇಷನ್ (ಮರು ಬಳಕೆದಾರಿಕೆ) .ನಮ್ಮ ದೇಶ, ರಾಜ್ಯ, ಜಿಲ್ಲೆ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ವಿದ್ಯಾರ್ಥಿಗಳು ಈ ವಿಷಯದ ಬಗ್ಗೆ ಆಳವಾಗಿ ಚಿಂತನೆ ನಡೆಸಿ ಉತ್ತಮ ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸಿ ಸಲ್ಲಿಸುತ್ತೀರೆಂಬ ವಿಶ್ವಾಸವಿದೆ ಎಂದರು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್ ಸಿ ಎಸ್ ಟಿ)ವತಿಯಿಂದ ಇಂತಹ ನಾವೀನ್ಯತಾ ಕಾರ್ಯಕ್ರಮಗಳನ್ನು ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಸಾಕಷ್ಟು ಚಟುವಟಿಕೆಗಳನ್ನು ಪ್ರತಿದಿನವೂ ಹಮ್ಮಿಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ವೇದಿಕ್ ಎಕ್ಸ್ಪರ್ಟ್ಸ್ ಪ. ಪೂ. ಕಾಲೇಜಿನ ನಿರ್ದೇಶಕ ಗಣಪತಿ ಎಸ್ ಮಿರ್ಜಿ ಮಾತನಾಡಿ, ತಂತ್ರಜ್ಞಾನದ ವೇಗವಾದ ಬೆಳೆವಣಿಗೆಗೆ ತಕ್ಕಂತೆ ಜಗತ್ತು ಈಗ ಜೆನೆರೇಟಿವ್ ಎಐ ನಿಂದ ಏಜೆಂಟಿಕ್ ಎಐ ಕಡೆಗೆ ಹೆಜ್ಜೆ ಇಡುತ್ತಿದೆ. ಎಲ್ಲ ಕೆಲಸಗಳೂ ತಂತ್ರಜ್ಞಾನದ ಮೂಲಕವೇ ಸುಲಭವಾಗಿ ಆಗುತ್ತಿರುವ ಈ ಕಾಲಘಟ್ಟದಲ್ಲಿ, ಮುಂದಿನ ಪೀಳಿಗೆಗೆ ಶಿಕ್ಷಕರು ಏನು ಕಲಿಸಬೇಕು ಎಂಬ ಗಂಭೀರ ಚರ್ಚೆ ಮುನ್ನೆಲೆಗೆ ಬಂದಿದೆ.ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ಹಿನ್ನೆಲೆಯುಳ್ಳ ಶಿಕ್ಷಕರೊಬ್ಬರು ಈ ಕುರಿತು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಚಾಟ್‌ಜಿಪಿಟಿ, ಜೆಮಿನಿ ನಂತಹ ಜನರೇಟಿವ್ ಎಐಗಳು ಕೇವಲ ಮಾಹಿತಿ ನೀಡಿದರೆ, ಇಂದಿನ ಏಜೆಂಟಿಕ್ ಎಐ ಪ್ರಾಂಪ್ಟ್ ನೀಡಿದ ಕೂಡಲೇ ಸಂಪೂರ್ಣ ಕೆಲಸವನ್ನು ತಾವೇ ನಿರ್ವಹಿಸುವ ಮಟ್ಟಿಗೆ ಬೆಳೆದಿವೆ. ಎಐ ಎಲ್ಲವನ್ನೂ ಮಾಡಬಲ್ಲ ಈ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಮಾಹಿತಿಯನ್ನು ನೆನಪಿಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ, ಸ್ವಂತವಾಗಿ ಆಲೋಚಿಸುವ ಮತ್ತು ವಿಮರ್ಶಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಮಾನವರಿಗೆ ಮಾತ್ರ ಸಾಧ್ಯವಿರುವ ‘ಕ್ರಿಟಿಕಲ್ ಥಿಂಕಿಂಗ್’ ಗುಣವನ್ನು ಶಿಕ್ಷಣದ ಮೂಲಕ ಬೆಳೆಸಿದಾಗ ಮಾತ್ರ ಎಐ ಅನ್ನು ಎದುರಿಸಿ ಯಶಸ್ಸು ಸಾಧಿಸಲು ಸಾಧ್ಯ. ಹೊಸತನ ಮತ್ತು ನಾವೀನ್ಯತೆಯನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಇಂತಹ ಸವಾಲುಗಳನ್ನು ಎದುರಿಸಲು ತಮ್ಮ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಇಂತಹ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಶಿಕ್ಷಕರಾದ ಕಾಂತರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದೊಂದಿಗೆ ‘ಸುಸ್ಥಿರತೆಗಾಗಿ ವಿಜ್ಞಾನ ಮತ್ತು ನಾವೀನ್ಯತೆ’ ಎಂಬ ಮುಖ್ಯ ವಿಷಯದಡಿ ಈ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಸ್ಪರ್ಧೆಯು 10 ರಿಂದ 14 ವರ್ಷದೊಳಗಿನ ‘ಜೂನಿಯರ್ ಗ್ರೂಪ್’ ಮತ್ತು 14 ರಿಂದ 17 ವರ್ಷದೊಳಗಿನ ‘ಸೀನಿಯರ್ ಗ್ರೂಪ್’ ಎಂಬ ಎರಡು ವಿಭಾಗಗಳಲ್ಲಿ ನಡೆಯಲಿದೆ.ಜಿಲ್ಲಾ ಮಟ್ಟದ ಈ ಸ್ಪರ್ಧೆಯಲ್ಲಿ ಅತ್ಯುತ್ತಮ ವಿಜ್ಞಾನ ಯೋಜನೆಗಳನ್ನು ಪ್ರದರ್ಶಿಸಿ ಆಯ್ಕೆಯಾಗುವ ತಂಡಗಳು ಮುಂದಿನ ಹಂತದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿವೆ.

ತದನಂತರ ರಾಜ್ಯ ಮಟ್ಟದಲ್ಲಿ ವಿಜೇತರಾಗುವ ತಂಡಗಳು ರಾಷ್ಟ್ರಮಟ್ಟದ ಸಮಾವೇಶದಲ್ಲಿ ತಮ್ಮ ಸಂಶೋಧನಾ ಮಾದರಿಗಳನ್ನು ಪ್ರದರ್ಶಿಸಲಿವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಡಿಡಿಪಿಐ ಮಂಜುನಾಥ್,ವಿಷಯ ಪರಿವೀಕ್ಷಕಿ ಅಸುಂತಾ ಸೀಕ್ವೆರಾ, ಡಯಟ್ ಉಪನ್ಯಾಸಕ ಅಶ್ವಿನ್ ಸಿ ಆರ್, ವಾರ್ತಾ ಸಹಾಯಕಿ ಭಾಗ್ಯ ಎಂ ಟಿ, ಎನ್ ಸಿ ಎಸ್ ಸಿ ಜಿಲ್ಲಾ ಸಂಯೋಜಕ ಶಂಕರ್ ಪಿ, ಜಿಲ್ಲಾ ವಿಜ್ಞಾನ ಸಂಘದ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

Author