ಶಿವಮೊಗ್ಗ, ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 2027-28ನೇ ಶೈಕ್ಷಣಿಕ ಸಾಲಿಗೆ ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ಹಾಗೂ ಮುಂದುವರಿಸಲು ಸಂಯೋಜನೆ ಪಡೆಯುವ ಸಂಬಂಧ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಕಲಂ 59(10)ರ ಪ್ರಕಾರ ಹೊಸ ಕಾಲೇಜುಗಳ ಪ್ರಾರಂಭ ಹಾಗೂ ಈಗಾಗಲೇ ಇರುವ ಕಾಲೇಜುಗಳ ಸಂಯೋಜನೆ ಮುಂದುವರಿಕೆಗೆ ಅರ್ಜಿಗಳನ್ನು ಯುಯುಸಿಎಂಎಸ್ ಆನ್ಲೈನ್ ಪೋರ್ಟಲ್ ಮೂಲಕ ಸಲ್ಲಿಸಬೇಕು.
ವಿಶ್ವವಿದ್ಯಾಲಯದ ವ್ಯಾಪ್ತಿಯ ಕಲಾ, ವಿಜ್ಞಾನ, ವಾಣಿಜ್ಯ, ಶಿಕ್ಷಣ, ಕಾನೂನು, ದೈಹಿಕ ಶಿಕ್ಷಣ ಹಾಗೂ ಇತರ ಪದವಿ ಕಾಲೇಜುಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಅವಕಾಶವಿದೆ.ಯುಯುಸಿಎಂಎಸ್ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅ.26 ರಿಂದ ಅವಕಾಶ ಕಲ್ಪಿಸಲಾಗಿದ್ದು, ದಂಡ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಲು ನ.10 ಕೊನೆಯ ದಿನವಾಗಿದೆ. ರೂ.10,000 ದಂಡ ಶುಲ್ಕದೊಂದಿಗೆ ನ.11ರಿಂದ ನ.21ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ www.kuvempu.ac.in ಸಂಪರ್ಕಿಸಬಹುದು ಎಂದು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
