ಮರದ ಕೊಂಬೆ ಬಿದ್ದು ಗಾಯಗೊಂಡ ವ್ಯಕ್ತಿಗೆ ಶಾಶ್ವತ ಅಂಗವೈಕಲ್ಯ : ₹2.77 ಕೋಟಿ ಪರಿಹಾರ ನೀಡಲು ಜಿಬಿಎಗೆ ಹೈಕೋರ್ಟ್ ಆದೇಶ

ಬೆಂಗಳೂರು

ಬೆಂಗಳೂರು, ಅಪಾಯಕಾರಿ ಮರದ ಕೊಂಬೆ ರಸ್ತೆ ಮೇಲೆ ಬೀಳುವ ಸಾಧ್ಯತೆಯ ಬಗ್ಗೆ ಮುಂಚಿತವಾಗಿ ಮಾಹಿತಿ ಇದ್ದರೂ ತುರ್ತು ಕ್ರಮ ಕೈಗೊಳ್ಳದ ಬಿಬಿಎಂಪಿ (ಹಾಲಿ ಜಿಬಿಎ) ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡ ಜಿ.ಚಂದನ್​ ಎಂಬುವರಿಗೆ ದಾಖಲೆಯ 2,77,29,695 ರೂ. ಪರಿಹಾರ ಪಾವತಿಸಲು ನಿರ್ದೇಶನ ನೀಡಿದೆ.

ಬೆಂಗಳೂರು ನಗರದಲ್ಲಿನ ಅಪಾಯಕಾರಿ ಮರಗಳ ತೆರವು ಸೇರಿದಂತೆ ಸಾರ್ವಜನಿಕ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿದೆ.38 ವರ್ಷದ ಚಂದನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಶೇ.6 ಬಡ್ಡಿಯೊಂದಿಗೆ ಪರಿಹಾರ ಧನ ಪಾವತಿಸುವಂತೆ ಆದೇಶಿಸಿದೆ.

ಪರಿಹಾರ ಮೊತ್ತದಲ್ಲಿ ಬಿಬಿಎಂಪಿ ಈಗಾಗಲೇ ಪಾವತಿಸಿರುವ 5 ಲಕ್ಷವನ್ನು ಕಡಿತಗೊಳಿಸಿ, ಉಳಿದ ಹಣ ಪಾವತಿಸಬೇಕು. ಅಪಘಾತ ಸಂಭವಿಸಿದ 2024ರ ಮಾರ್ಚ್ 7ರಿಂದ ಪಾವತಿ ಮಾಡುವವರೆಗೆ ಶೇ.6ರಷ್ಟು ವಾರ್ಷಿಕ ಬಡ್ಡಿ ಅನ್ವಯಿಸುತ್ತದೆ. ಬಿಬಿಎಂಪಿ ಮತ್ತು ಸಂಬಂಧಿತ ನಗರ ಸ್ಥಳೀಯ ಸಂಸ್ಥೆಗಳು ತೀರ್ಪಿನ ಪ್ರತಿ ಪಡೆದ ಬಳಿಕ 12 ವಾರಗಳೊಳಗೆ ಆರ್​ಟಿಜಿಎಸ್ ಮೂಲಕ ಮೊತ್ತ ಪಾವತಿಸಬೇಕು ಎಂದು ಪೀಠ ಹೇಳಿದೆ.

ಮರ ಕತ್ತರಿಸಲು ಅನುಮತಿ ನೀಡಲು 13 ದಿನ ತೆಗೆದುಕೊಂಡಿರುವುದು ಅಸಾಮಾನ್ಯ ವಿಳಂಬವಲ್ಲ.

ಮರ ಖಾಸಗಿ ಜಾಗದಲ್ಲಿದೆ ಮತ್ತು ಘಟನೆ ದೈವಿಕ ಕಾರಣದಿಂದ ಸಂಭವಿಸಿದೆ ಎಂಬ ಬಿಬಿಎಂಪಿಯ ವಾದ ಒಪ್ಪಲಾಗುವುದಿಲ್ಲ. ಅಪಾಯದ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಬಂದ ಬಳಿಕವೂ ಮರ ಖಾಸಗಿ ಜಾಗದಲ್ಲಿದ್ದರೂ ಸಾರ್ವಜನಿಕ ರಸ್ತೆ ಮತ್ತು ಜನರ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳುವುದು ಬಿಬಿಎಂಪಿಯ ಕಾನೂನುಬದ್ಧ ಕರ್ತವ್ಯ. ಅಪಾಯ ತಿಳಿದಿದ್ದ ಸಂದರ್ಭದಲ್ಲಿ ಪ್ರಕೃತಿ ಕಾರಣವನ್ನು ನೆಪವಾಗಿ ಬಳಸಲಾಗದು ಎಂದು ಪೀಠಹೇಳಿದೆ.

Author