ಶಿವಮೊಗ್ಗ ನಗರದ ಮಲ್ಲಿಕಾರ್ಜುನ ಚಿತ್ರಮಂದಿರದ ಪಕ್ಕದ ಕನ್ಸರ್ವೆನ್ಸಿ ಹಾಗೂ ಎಸ್.ಎಲ್.ಎನ್. ರಸ್ತೆಯಲ್ಲಿರುವ ಫುಡ್ಕೋರ್ಟ್ನಲ್ಲಿ ಪ್ರತಿದಿನ ಸಹಸ್ರಾರು ಸಂಖ್ಯೆಯ ಜನ ಆಹಾರ, ಖಾದ್ಯಗಳನ್ನು ಸೇವಿಸುತ್ತಿದ್ದು, ಜನರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ತಯಾರಿಕಾ ಸ್ಥಳದ ಸ್ವಚ್ಚತೆ ಕಾಪಾಡಿಕೊಳ್ಳುವುದು, ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಹಾಗೂ ಶುದ್ಧ ನೀರಿನಿಂದ ಆಹಾರವನ್ನು ತಯಾರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ.ಮೈತ್ರಿ ಅವರು ಫುಡ್ಕೋರ್ಟಿನ ಮಾಲೀಕರಿಗೆ ಸೂಚಿಸಿದರು.
ಅವರು ನಿನ್ನೆ ತಾಲೂಕು ಆರೋಗ್ಯಾಧಿಕಾರಿಗಳು, ಕಂದಾಯಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳ ತಂಡದೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಅವರು, ಅಲ್ಲಿನ ಪ್ರದೇಶದ ಸ್ವಚ್ಚತೆಯನ್ನು ಪರಿಶೀಲಿಸಿ, ಕಾಲಕಾಲಕ್ಕೆ ಔಷಧಿ ಸಂಪಡಿಸಿ, ಸ್ವಚ್ಚವಾಗಿಟ್ಟುಕೊಳ್ಳುವಂತೆ ಸೂಚಿಸಿದ ಅವರು, ನೈರ್ಮಲ್ಯ ಕಾಪಾಡಿಕೊಳ್ಳದಿದ್ದಲ್ಲಿ ನೀಡಿರುವ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದವರು ಎಚ್ಚರಿಸಿದರು.

ಫುಡ್ಕೋರ್ಟಿನಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳದಿರುವ ಬಹುತೇಕ ಎಲ್ಲಾ ಅಂಗಡಿಗಳ ಮಾಲೀಕರಿಗೆ ತಕ್ಷಣವೇ ನೋಟೀಸ್ಜಾರಿಗೊಳಿಸಲು ಸೂಚಿಸಲಾಗಿದೆ. ಅಂತೆಯೇ ಮುಂದಿನ 15ದಿನಗಳೊಳಗಾಗಿ ಎಲ್ಲಾ ಅಂಗಡಿಗಳ ಮಾಲೀಕರ ಸಭೆಯನ್ನು ಕರೆದು, ಸ್ವಚ್ಚತೆ, ಕುಡಿಯುವ ನೀರು ಮತ್ತು ರಾಸಾಯನಿಕಗಳನ್ನು ಬಳಸಿ ಆಹಾರ ತಯಾರಿಕೆ ಮಾಡದಂತೆ ಸೂಚಿಸಲಾಗುವುದು ಎಂದವರು ನುಡಿದರು.
ಇದೇ ಸಂದರ್ಭದಲ್ಲಿ ಕೆಲವು ಅಂಗಡಿಗಳಲ್ಲಿ ತಯಾರಾದ ಖಾದ್ಯಗಳಲ್ಲಿ ರಾಸಾಯನಿಕಗಳ ಬಳಕೆ ಆಗಿರುವ ಬಗ್ಗೆ ಅನುಮಾನ ಬಂದ ಕೆಲವು ಅಂಗಡಿಗಳ ಖಾದ್ಯ ತುಣುಕುಗಳ ಮಾದರಿಯನ್ನು ಪರೀಕ್ಷೆಗಾಗಿ ತೆಗೆದುಕೊಂಡ ಅವರು, ಉತ್ತಮ ಗುಣಮಟ್ಟದ ಎಣ್ಣೆಯನ್ನು ಬಳಸಬೇಕು. ಆಹಾರ ತಯಾರಿಕಾ ಸ್ಥಳದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದು ಅಂಗಡಿಗಳ ಮಾಲೀಕರಿಗೆ ಸೂಚಿಸಿದ ಅವರು, ಸಮಗ್ರ ಪರಿಶೀಲನಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ|ಚಂದ್ರಶೇಖರ್, ಕಂದಾಯಾಧಿಕಾರಿ ಸತೀಶ್, ದೀಪಕ್, ದೊಡ್ಡಬಸಪ್ಪರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.





