ಶಿವಮೊಗ್ಗ | ಹುಟ್ಟು ಮೂಕನಾಗಿರುವ ತಂದೆಗೆ ಅಂಗವಿಕಲರ ವೇತನ ಕೊಡಿಸಲು ಲಂಚಕ್ಕೆ ಬೇಡಿಕೆ : ಉಪ ತಹಶೀಲ್ದಾರ್‌ಗೆ 4 ವರ್ಷ ಜೈಲು, ರೂ.40 ಸಾವಿರ ದಂಡ

ಕ್ರೈಂ

ಶಿವಮೊಗ್ಗ, ಹುಟ್ಟು ಮೂಕನಾಗಿರುವ ತಂದೆಗೆ ಅಂಗವಿಕಲರ ವೇತನ ಕೊಡಿಸಲು ರೂ.10,000 ಲಂಚಕ್ಕೆ ಬೇಡಿಕೆಯಿಟ್ಟು, ಮುಂಗಡವಾಗಿ ರೂ.5,000 ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಭದ್ರಾವತಿ ತಾಲೂಕಿನ ಕಲ್ಲಿಹಾಳ್‌ ನಾಡಕಚೇರಿಯ ಉಪ ತಹಶೀಲ್ದಾರ್‌ ಶ್ರೀಮತಿ ಪುಷ್ಪಲತಾ ಅವರಿಗೆ ಶಿವಮೊಗ್ಗದ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು 4 ವರ್ಷಗಳ ಸಜೌ ಮತ್ತು ₹40,000 ದಂಡ ವಿಧಿಸಿ ತೀರ್ಪು ನೀಡಿದೆ.

ಭದ್ರಾವತಿ ತಾಲೂಕಿನ ಡಿ.ಬಿ. ಹಳ್ಳಿಯ ನಿವಾಸಿ ಗಿರೀಶ್‌ ಎಂಬುವರು ತಮ್ಮ ಹುಟ್ಟು ಮೂಕ ತಂದೆಗೆ ಅಂಗವಿಕಲರ ಪಿಂಚಣಿ ಸೌಲಭ್ಯ ಪಡೆಯಲು ಕಲ್ಲಿಹಾಳ್‌ ನಾಡಕಚೇರಿಗೆ ತೆರಳಿದ್ದಾಗ, ಉಪ ತಹಶೀಲ್ದಾರ್‌ ಪುಷ್ಪಲತಾ ಅವರು ರೂ.10,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಗಿರೀಶ್‌ ಅವರು ನೀಡಿದ ದೂರಿನನ್ವಯ 2017 ರ ಸೆಪ್ಟೆಂಬರ್ 21 ರಂದು ಭದ್ರಾವತಿ ತಾಲೂಕು ಕಚೇರಿಯಲ್ಲಿ ಗಿರೀಶ್‌ ಅವರಿಂದ ರೂ.5,000 ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಅಧಿಕಾರಿಯನ್ನು ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದರು.

ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಹೆಚ್.ಎಸ್.ತಿಪ್ಪೇಸ್ವಾಮಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಶಿವಮೊಗ್ಗದ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು 2026 ರ ಸೆಪ್ಟೆಂಬರ್ 1 ರಂದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ಪ್ರಕಟಿಸಿದೆ. ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಸುಂದರ್‌ ರಾಜ್‌ ಅವರು ವಾದ ಮಂಡಿಸಿದ್ದರು. 

Author