ಶಿವಮೊಗ್ಗ | ಗದ್ದೆಯೇ ತರಗತಿ, ಕೃಷಿಯೇ ಪಾಠ : ಹಾರೋಗೊಪ್ಪದಲ್ಲಿ ಮಕ್ಕಳ ಕೃಷಿ ಕ್ಷೇತ್ರ ದಿನ

ಶಿವಮೊಗ್ಗ

ಶಿವಮೊಗ್ಗ,ಹಾರೋಗೊಪ್ಪ, ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್ಸ್, ಮಲ್ಲಾಡಿಹಳ್ಳಿ, ಕೃಷಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಾರೋಗೊಪ್ಪ ಗ್ರಾಮದಲ್ಲಿ “ಮಕ್ಕಳ ಕೃಷಿ ಕ್ಷೇತ್ರ ದಿನ” ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಕಿರಣ್ ಕುಮಾರ್ ಹರ್ತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶಪ್ಪ ಕೆ. ಬಿ. ಅವರು ವಿದ್ಯಾರ್ಥಿಗಳೊಂದಿಗೆ ಗದ್ದೆಗಿಳಿದು ಭತ್ತ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಈ ಸಂದರ್ಭದಲ್ಲಿ ಎಡಿಎ ಕಿರಣ್ ಕುಮಾರ್ ಹರ್ತಿ ಅವರು ಸಾವಯವ ಕೃಷಿಯ ಮಹತ್ವದ ಕುರಿತು ಮಾತನಾಡಿ, ಮಣ್ಣಿನ ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಆರೋಗ್ಯಕರ ಆಹಾರ ಉತ್ಪಾದನೆಗಾಗಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು.

ಬಿಇಒ ಲೋಕೇಶಪ್ಪ ಕೆ. ಬಿ. ಅವರು ವಿದ್ಯಾರ್ಥಿಗಳಿಗೆ ಭತ್ತ ನಾಟಿ ಮಾಡುವ ಪ್ರಾಯೋಗಿಕ ವಿಧಾನವನ್ನು ವಿವರಿಸಿ, ಸಸಿಗಳನ್ನು ಸರಿಯಾದ ಅಂತರದಲ್ಲಿ ಹಾಗೂ ಸರಿಯಾದ ಆಳದಲ್ಲಿ ನಾಟಿ ಮಾಡುವ ವಿಧಾನವನ್ನು ಗದ್ದೆಯಲ್ಲಿ ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾರೋಗೊಪ್ಪದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲೋಲಾಕ್ಷಿ ಆರ್. ಎಸ್. ಹಾಗೂ ಸರ್ಕಾರಿ ಪ್ರೌಢಶಾಲೆ, ಹಾರೋಗೊಪ್ಪದ ಮುಖ್ಯೋಪಾಧ್ಯಾಯರಾದ l ನಾಗಪ್ಪ ಎಂ. ಆರ್. ಅವರ ನೇತೃತ್ವದಲ್ಲಿ ಎರಡೂ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ದೊರೆ ರಾಜ್, ಸಹಾಯಕ ತೋಟಗಾರಿಕೆ ಅಧಿಕಾರಿ ಅವರು ಕಾರ್ಯಕ್ರಮಕ್ಕೆ ಆಗಮಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರೊಂದಿಗೆ ಸಂವಾದ ನಡೆಸಿದರು. ಪ್ರಸ್ತುತ ಕೃಷಿ ಕ್ಷೇತ್ರದಲ್ಲಿನ ಪರಿಸ್ಥಿತಿ, ರೈತರು ಎದುರಿಸುತ್ತಿರುವ ಸವಾಲುಗಳು ಹಾಗೂ ಕೃಷಿಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ರೈತರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯಗಳನ್ನು ಆಲಿಸಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್ಸ್ ವತಿಯಿಂದ ಇಂದ್ರಕುಮಾರ್, ಪವನ್ ಹಾಗೂ ಲೋಕೇಶ್ ಹಾಗೂ ಭವಾನಿ ಆಗ್ರೋ ಇನ್‌ಪುಟ್ಸ್‌ನ ರಾಕೇಶ್ ಅವರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಗದ್ದೆಗಿಳಿದು ಭತ್ತ ನಾಟಿ ಮಾಡುವ ಮೂಲಕ ಕೃಷಿಯ ನೈಜ ಅನುಭವವನ್ನು ಪಡೆದರು. ಪುಸ್ತಕದ ಜ್ಞಾನಕ್ಕೆ ಪ್ರಾಯೋಗಿಕ ಕೃಷಿ ಅನುಭವವನ್ನು ಜೋಡಿಸುವ ಮೂಲಕ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮತ್ತು ಗೌರವ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

Author