ಶಿವಮೊಗ್ಗ,ಶಿಕಾರಿಪುರ, ಹಿಂದುತ್ವದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು, ಬೇರೆ ಬೇರೆ ವಿಚಾರ ಮಾತನಾಡುವ ಗೃಹ ಸಚಿವರು ಕೂಡಲೇ ಎಚ್ಚೆತ್ತುಕೊಳ್ಗಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಗೋ ಕಳ್ಳಸಾಗಾಣಿಕೆದಾರರಿಂದ ಗಾಯಗೊಂಡವರನ್ನು ಇಂದು ಶಿಕಾರಿಪುರದ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಅವರು ಗಾಯಾಳುಗಳಿಗೆ ಧೈರ್ಯ ಹೇಳಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಕಾಪಾಡಬೇಕೆಂಬ ಇಚ್ಛಾಶಕ್ತಿ ರಾಜ್ಯ ಸರಕಾರಕ್ಕೆ ಇದ್ದಲ್ಲಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ನಾನು ಈಗಾಗಲೇ ಶಿವಮೊಗ್ಗ ಎಸ್ಪಿ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.
ವಾಹನಗಳನ್ನು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಅಷ್ಟೇ ಆದರೆ ಸಾಲದು. ದೇಶದ್ರೋಹಿಗಳನ್ನು ಒದ್ದು ಒಳಗೆ ಹಾಕಬೇಕು ಎಂದು ಆಗ್ರಹವನ್ನು ಮುಂದಿಟ್ಟರು.
ಜಾಮೀನು ಆಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು;
ಇದು ಮರುಕಳಿಸದಂತೆ ಸರ್ಕಾರ ಎಚ್ಚತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು. ಇಂಥ ಘಟನೆಗಳು ಮರುಕಳಿಸಿದರೆ ಕಾನೂನು- ಸುವ್ಯವಸ್ಥೆ ಕೈಮೀರಿ ಹೋಗಲಿದೆ ಎಂದು ತಿಳಿಸಿದರು.

ಘಟನೆ ವಿವರ:
ನಿನ್ನೆ ಮಧ್ಯರಾತ್ರಿ ಹರತಾಳು ಹತ್ತಿರ ಕೆಲವು ದುಷ್ಕರ್ಮಿಗಳು ಚಂದನ್ ಅವರ ಮನೆಯಿಂದ ಗೋವುಗಳನ್ನು ಹೇರಿಕೊಂಡು ಹೋಗುವ ಸಂದರ್ಭದಲ್ಲಿ ಬಜರಂಗದಳದ ಅಲ್ಲಿನ ಕಾರ್ಯಕರ್ತ ಚಂದನ್ ಮತ್ತು ಇತರರು ಜಾಗೃತರಾದರು. ಚಂದನ್, ಕಿರಣ್, ಅಭಿಲಾಷ್ ಅವರು ಆ ವಾಹನವನ್ನು ಬೆನ್ನಟ್ಟಿದರು. ಪಿಕಪ್ ವಾಹನದಲ್ಲಿ ಗೋವುಗಳನ್ನು ಕದ್ದು ಸಾಗಿಸುತ್ತಿದ್ದರು. ಪೊಲೀಸ್ ತಪಾಸಣಾ ಸ್ಥಳದಲ್ಲಿ ವಾಹನ ನಿಲ್ಲಿಸದೇ ತೆರಳಿದ್ದರು ಎಂದು ವಿವರಿಸಿದರು.
ಬಜರಂಗದಳದ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಪ್ರಯತ್ನ ಮಾಡಿದ್ದಾರೆ. ಇಂಥ ಗಂಭೀರ ಪ್ರಕರಣವು ರಾಜ್ಯದ ಕಾನೂನು- ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ನಿದರ್ಶನ ಎಂದು ವಿಜಯೇಂದ್ರ ಟೀಕಿಸಿದರು.





