ಶಿವಮೊಗ್ಗ, ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆಯ ವತಿಯಿಂದ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಆಗಸ್ಟ್ 29 ರಿಂದ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷರಾದ ಆರ್ ಎಂ. ಮಂಜುನಾಥ್ ಗೌಡ ತಿಳಿಸಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, 2013 ರಿಂದ ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರುವುದಾಗಿ ಹೇಳಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ರಾಜ್ಯದಲ್ಲಿ ಒಟ್ಟು 1,446 ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಕೇಂದ್ರ ಸರ್ಕಾರ ಗುರುತಿಸಿದೆ.
ಇದರಲ್ಲಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ ತೀರ್ಥಹಳ್ಳಿ 146, ಶಿವಮೊಗ್ಗ 64, ಸಾಗರ 126, ಹೊಸನಗರ 125 ಹಾಗೂ ಶಿಕಾರಿಪುರದಲ್ಲಿ 12 ಗ್ರಾಮಗಳು ಸೇರಿ ಒಟ್ಟು 473 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಹಿಂದೆ ಈ ಕುರಿತಾಗಿ ಅನೇಕ ಪಾದಯಾತ್ರೆಗಳನ್ನು ನಡೆಸಲಾಗಿತ್ತು. ಇದೀಗ ಮತ್ತೆ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ,ಎಂದರು.
ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಲು ಸುಮಾರು 60 ದಿನಗಳ ಕಾಲಾವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿರಂಗನ ವರದಿಯನ್ನು ವಿರೋಧಿಸಿ ನಾವು ಮೊದಲಿಗೆ ಆಗಸ್ಟ್ ಕೊನೆಯ ವಾರದಲ್ಲಿ ಹೊಸನಗರದಲ್ಲಿ ಹೋರಾಟವನ್ನು ಆರಂಭಿಸುತ್ತೇವೆ. ನಂತರ ತೀರ್ಥಹಳ್ಳಿ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಪಾದಯಾತ್ರೆ ನಡೆಸಲಿದ್ದೇವೆ. ಅಂತಿಮವಾಗಿ ಅಕ್ಟೋಬರ್ ಕೊನೆಯ ವಾರದಲ್ಲಿ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಸುಮಾರು 1 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೆ ಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟ ಸೇರಿದಂತೆ ನಮ್ಮ ಸಾವಿರಾರು ಸಂಸ್ಥೆಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುತ್ತೇವೆ.
ಈ ಹಿಂದೆ ಕೇರಳದಲ್ಲೂ ಸಹ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿತ್ತು, ಆದರೆ ಅಲ್ಲಿನ ಜನರ ತೀವ್ರ ಹೋರಾಟದಿಂದಾಗಿ ಅದನ್ನು ಕೈಬಿಡಲಾಯಿತು. ಇಲ್ಲಿಯೂ ಸಹ ಅದೇ ರೀತಿಯ ಹೋರಾಟವನ್ನು ರೂಪಿಸಬೇಕಾಗಿದೆ, ಎಂದು ಹೇಳಿದರು.
ಇದೇ ವೇಳೆ ಕಸ್ತೂರಿ ರಂಗನ್ ವರದಿಯಿಂದ ಜನರಿಗೆ ಹಾಗೂ ರೈತರಿಗೆ ಆಗುವ ತೊಂದರೆಗಳನ್ನು ಅವರು ಸವಿಸ್ತಾರವಾಗಿ ವಿವರಿಸಿದರು. ಕಸ್ತೂರಿ ರಂಗನ್ ವರದಿ ಜಾರಿಯಾದರೆ ರೈತರು ಉಳುಮೆ ಮಾಡಲು ಟ್ರ್ಯಾಕ್ಟರ್ ಸೇರಿದಂತೆ ಯಾವುದೇ ಯಂತ್ರಗಳನ್ನು ಬಳಸುವಂತಿಲ್ಲ, ರಾಸಾಯನಿಕ ಗೊಬ್ಬರಗಳನ್ನು ಹಾಕುವಂತಿಲ್ಲ, ಡಾಂಬರು ರಸ್ತೆ ನಿರ್ಮಿಸುವಂತಿಲ್ಲ ಹಾಗೂ ಅಡಿಕೆ ಕೊಳೆರೋಗಕ್ಕೆ ಔಷಧಿ ಸಿಂಪಡಿಸುವಂತೆಯೂ ಇಲ್ಲ. ಅಷ್ಟೇ ಏಕೆ, ಕಾಡಿಗೆ ಜಾನುವಾರುಗಳನ್ನು ಬಿಡದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಧಿಕಾರಿಗಳು ಯಾವುದೇ ಪ್ರಾಯೋಗಿಕ ಸರ್ವೇ ಮಾಡದೆ, ಸ್ಯಾಟಲೈಟ್‌ನಲ್ಲಿ ಕಂಡ ಅಡಿಕೆ ಮತ್ತು ತೆಂಗಿನ ಮರಗಳನ್ನೇ ಕಾಡೆಂದು ಭಾವಿಸಿದ್ದಾರೆ.
ಅವರು ರೈತರು ವಾಸಿಸುವ ಪ್ರದೇಶಕ್ಕೆ ಬಂದು ಚರ್ಚೆ ನಡೆಸಬೇಕು, ಆಗ ಮಾತ್ರ ರೈತರ ನೈಜ ಪರಿಸ್ಥಿತಿ ಅರ್ಥವಾಗುತ್ತದೆ. ಕಸ್ತೂರಿ ರಂಗನ್ ವರದಿಗೆ ನಮ್ಮ ಸಂಪೂರ್ಣ ವಿರೋಧವಿದೆ, ಎಂದು ಸ್ಪಷ್ಟಪಡಿಸಿದರು.





