ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್ ಆಯ್ಕೆ

ರಾಜಕೀಯ

ಬೆಂಗಳೂರು, ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಆಭ್ಯರ್ಥಿ ಸಲೀಂ ಅಹ್ಮದ್ ಆಯ್ಕೆಯಾಗಿದ್ದಾರೆ.ಕಲಾಪ ಆರಂಭವಾಗುತ್ತಿದ್ದಂತೆ ಹಂಗಾಮಿ ಸಭಾಪತಿ ಪುಟ್ಟಣ್ಣ ಚುನಾವಣಾ ಪ್ರಕ್ರಿಯೆ ಆರಂಭಿಸಿದರು‌. ಕಾಂಗ್ರೆಸ್ ಆಭ್ಯರ್ಥಿ ಪರವಾಗಿ 38 ಮತಗಳು ಬಂದರೆ ಮೈತ್ರಿ ಕೂಟದ ಆಭ್ಯರ್ಥಿಗೆ 30 ಮತಗಳು ಬಂದವು.

ಬಹುಮತ ಪಡೆದ ಸಲೀಂ ಅಹ್ಮದ್ ಅವರು ನೂತನ ಸಭಾಪತಿಯಾಗಿ ಘೋಷಿಸಲಾಯಿತು. ಬಳಿಕ ಸಭಾಪತಿಯನ್ನ ಆಡಳಿತ ಮತ್ತು ಪ್ರತಿಪಕ್ಷ ನಾಯಕರು ಪೀಠಕ್ಕೆ ಕರೆತಂದು ಆಸೀನರನ್ನಾಗಿ ಗೌರವಿಸಿ ಪಕ್ಷಾತೀತವಾಗಿ ಎಲ್ಲ ಸದಸ್ಯರು ಅಭಿನಂದನೆ ಸಲ್ಲಿಸಿದರು.

ಆಡಳಿತ ಪಕ್ಷದ ನಾಯಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸಲೀಂ ಅಹ್ಮದ್ ಅವರು ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ತತ್ವ ಸಿದ್ದಾಂತಗಳಿಗೆ ಮಾರುಹೋದವರು. ಹಂತ – ಹಂತವಾಗಿ ಕಾಂಗ್ರೆಸ್ ನೀಡಿದ ಹುದ್ದೆಗಳನ್ನ ಸಮರ್ಥವಾಗಿ ನಿಭಾಯಿಸಿ ಇಂದು ಸಭಾಪತಿಯಾಗಿ ಆಯ್ಕೆಯಾಗಿರುವುದು ಸಂತೋಷ ತಂದಿದೆ ಎಂದರು.

ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಲೀಂ ಅಹ್ಮದ್ ಅವರೊಂದಿನ ನಮ್ಮ ಸ್ನೇಹ ನಾಲ್ಕು ದಶಕದ ಹಳೆಯದು. ವೈಯಕ್ತಿಕವಾಗಿ ನಾವು ಸ್ನೇಹಿತರು. ಆದರೆ, ರಾಜಕೀಯವಾಗಿ‌ ಬೇರೆ ಬೇರೆ ಸಿದ್ದಾಂತದಲ್ಲಿ ನಾವು ಕೆಲಸ ಮಾಡ್ತಿದ್ದೇವೆ. ಜಾತ್ಯತೀತ ಮಾತ್ರವಲ್ಲ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದರು.

ಸಭಾಪತಿ ಸ್ಥಾನಕ್ಕೆ ಸಲೀಂ ಅಹ್ಮದ್ ಅವರು ಕಾಂಗ್ರೆಸ್ ಪಕ್ಷದ ಲೆಟರ್ ಹೆಡ್​ನಲ್ಲಿ ಬಂದಿರುವುದು ಅಕ್ಷಮ್ಯ ಅಪರಾಧ‌. ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರೆ ಈ ಬಗ್ಗೆ ಪ್ರಸ್ತಾಪ ಮಾಡುತ್ತಿರಲಿಲ್ಲ ಎಂದರು.

Author