ಶಿವಮೊಗ್ಗ, ನಗರದ ನ್ಯೂ ಮಂಡ್ಲಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ವಾಗತಿಸುವ ಅಂಗವಾಗಿ ಶಾಲೆಯ ಪ್ರಥಮ ಹಾಗೂ ದ್ವಿತೀಯ ತರಗತಿಯ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಭಾವನೆಯನ್ನು ಬೆಳೆಸುವ ಉದ್ದೇಶದಿಂದ ಸುಂದರವಾದ ಕರಕುಶಲ ಚಟುವಟಿಕೆಯನ್ನು ಬುಧವಾರ ಆಯೋಜಿಸಲಾಗಿತ್ತು.
ಈ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ತ್ರಿವರ್ಣ ಧ್ವಜದ ಬಣ್ಣಗಳನ್ನು ಬಳಸಿಕೊಂಡು ವಿವಿಧ ರೀತಿಯ ಸುಂದರ ಕಲಾಕೃತಿಗಳು ಹಾಗೂ ವಸ್ತುಗಳನ್ನು ತಯಾರಿಸುವ ಮೂಲಕ ತಮ್ಮ ಸೃಜನಶೀಲ ಪ್ರತಿಭೆಯನ್ನು ಪ್ರದರ್ಶಿಸಿದರು.
ವಿದ್ಯಾರ್ಥಿಗಳ ಈ ಸೃಜನಾತ್ಮಕ ಪ್ರದರ್ಶನವನ್ನು ಕಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಸಂತೋಷ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇಂತಹ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯ ಏಕತೆ ಹಾಗೂ ಸೃಜನಶೀಲತೆಯ ಮನೋಭಾವವನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇಂತಹ ಅರ್ಥಪೂರ್ಣ ಚಟುವಟಿಕೆಯನ್ನು ಆಯೋಜಿಸಿದ ಎಲ್ಲಾ ಶಿಕ್ಷಕರಿಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಿಯಾಜ್ ಅಹ್ಮದ್, ಫಾರೂಕಿಯಾ ಶಾದಿ ಮಹಲ್ನ ಮಾಲೀಕ ಜುಬೈರ್ ಅಹ್ಮದ್, ಜವಾದ್ ಅಹ್ಮದ್, ಸಿಆರ್ಪಿ ಮಹಬೂಬ್ ಅಲಿ, ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರಾದ ರುಖ್ಸಾನಾ ಬೇಗಂ, ರಜಿಯಾ ಸುಲ್ತಾನಾ, ಗುಲ್ರೇಜ್ ಬಾನು, ನಸ್ರುಲ್ಲಾ, ಆಯಿಷಾ ಬಾನು, ಶ್ರೀಮತಿ ಶಹಜೀನ್ ಫಾತಿಮಾ, ಶ್ರೀಮತಿ ಸಾದಿಯಾ ಹಲೀಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.





