ದಾವಣಗೆರೆ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಿದ್ದೇಶ್ವರ್​ ಅಸಮಾಧಾನ

ದಾವಣಗೆರೆ

ದಾವಣಗೆರೆ, ನಮ್ಮನ್ನು ಕೇಳದೆಯೇ ಜಿಲ್ಲಾ ಬಿಜೆಪಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಮೊನ್ನೆ ಬಿಡುಗಡೆ ಮಾಡಿದ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಗ್ಗೆ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಪಟ್ಟಿ ಬದಲಾವಣೆ ಮಾಡಿ ಎಂದು ರಾಜ್ಯಾಧ್ಯಕ್ಷರ ಗಮನಕ್ಕೆ ತರುತ್ತೇವೆ. ಬದಲಾವಣೆ ಮಾಡದೇ ಇದ್ದರೆ ಮುಂದೆ ಚರ್ಚೆ ಮಾಡುತ್ತೇವೆ. ಜಿಲ್ಲಾ ಕಮಿಟಿ ಮಾಡುತ್ತಿರುವುದನ್ನು ನಮ್ಮ ‌ಗಮನಕ್ಕೆ ತಂದಿಲ್ಲ.

ನಮ್ಮನ್ನು ಹಿರಿಯ ನಾಯಕರು ಎಂದು ಇಲ್ಲಿಯವರೇ ಹೇಳ್ತಾರೆ ಅಷ್ಟೇ, ರಾಜ್ಯಾಧ್ಯಕ್ಷರ ಕಣ್ಣಿಗೆ ನಾನು ಕುಳ್ಳ (ಸಣ್ಣವನು). ರಾಜ್ಯಾಧ್ಯಕ್ಷರು ಜಿಲ್ಲಾ ನಾಯಕರಿಗೆ ಹಾರ್ಟ್ ಇಲ್ಲ ಎಂದು ಹೇಳಿದ್ದರು. ನಾನೇ ಹೇಳುತ್ತೇನೆ ಮೊದಲು ರಾಜ್ಯಾಧ್ಯಕ್ಷರಿಗೆ ಹಾರ್ಟ್ ಇಲ್ಲ. ಇದಕ್ಕಿಂತ ಏನು ಹೇಳೋದಿಲ್ಲ, ಅವರೇ ಅರ್ಥ ಮಾಡಿಕೊಳ್ಳಲಿ ಎಂದರು.

ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಬದಲಾವಣೆ ಮಾಡಿದ್ದಾರೆ, ಮಾಡಲಿ. ಆದರೆ ಬದಲಾವಣೆ ಮಾಡುವಾಗ ನಮ್ಮನ್ನು ಒಂದು ಮಾತು ಕೇಳಬೇಕಿತ್ತು. ನಾವು ಮಾಡಿದ್ದ ಪ್ರಧಾನ ಕಾರ್ಯದರ್ಶಿಗಳನ್ನು ಏಕೆ ತೆಗೆದರು ಎನ್ನುವುದು ಗೊತ್ತಾಗಬೇಕಿದೆ. ಮೂರು ತಿಂಗಳಿಗೆ ಪ್ರಧಾನ ಕಾರ್ಯದರ್ಶಿಗಳನ್ನು ತೆಗೆದರೆ ಅದರ ಅರ್ಥ ಏನು?. ಹೀಗೆ ಮಾಡಿದರೆ ನಾವು ಕಾರ್ಯಕರ್ತರಿಗೆ ಮತ್ತು ಜನರಿಗೆ ಏನು ಉತ್ತರ ಕೊಡಬೇಕು?. ರಾಜ್ಯಾಧ್ಯಕ್ಷರೇ ಇದಕ್ಕೆಲ್ಲ ಉತ್ತರ ಕೊಡಬೇಕು ಎಂದು ಹೇಳಿದರು.

ನಾನು ರಾಜ್ಯಾಧ್ಯಕ್ಷರಿಗೆ ಕರೆ ಮಾಡಿ ಮಾತನಾಡಿದರೆ ಇವತ್ತು ಅಮವಾಸ್ಯೆ ಇದೆ ಮಾತಾಡೋದು ಬೇಡಾ ಅಂತ ಹಾಗೆಯೇ ಇಟ್ಟರು. ಹಿಂದಿರುವ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಿ ಎಂದು ನಾವು ಹೇಳಿರಲಿಲ್ಲ. ಈಗ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿದಾಗಲೂ ಕೂಡ ನಮಗೆ ಒಂದು ಮಾತು ತಿಳಿಸಿಲ್ಲ. ಜಿಲ್ಲಾ ಉಸ್ತುವಾರಿ ಪ್ರೀತಂ ಗೌಡ ಅವರಿಗೆ ನಾನು ಒಂದು ಲಿಸ್ಟ್ ಕೊಟ್ಟು ಬಂದಿದ್ದೆ. ಇದರಲ್ಲಿ 70% ಜನರನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದರು.

70% ರಷ್ಟಾಗಿದಿದ್ದರೂ 50% ಆದರೂ ಆಯ್ಕೆ ಮಾಡಿ ಎಂದು ಹೇಳಿದ್ದೆ. ಆದರೆ ಈಗ ಪುಣ್ಯಾತ್ಮ ಫೋನೇ ರಿಸೀವ್ ಮಾಡ್ತಿಲ್ಲ ಎಂದು ಪ್ರೀತಂಗೌಡ ವಿರುದ್ಧ ಅಸಮಾಧಾನ ಹೊರ ಹಾಕಿದರು.

Author