ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೇಶದ ಪ್ರಥಮ ಹೈಡ್ರೋಜನ್ ಚಾಲಿತ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಹರಿಯಾಣದ ಜಿಂದ್ನಿಂದ ಸೋನಿಪತ್ ಮಾರ್ಗದಲ್ಲಿ ಈ ಹೈಡ್ರೋಜನ್ ರೈಲು ತನ್ನ ಮೊದಲ ಸಂಚಾರವನ್ನು ಆರಂಭಿಸಿದೆ.

ರೈಲಿನ ವೈಶಿಷ್ಟ್ಯ :
ಇಂಧನವಾಗಿ ಡೀಸೆಲ್ ಬಳಸುವ ಹಾಗೂ ಕಾರ್ಬನ್ ಹೊರಸೂಸುವ ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ, ಈ ಹೈಡ್ರೋಜನ್ ಚಾಲಿತ ರೈಲು ಭಿನ್ನವಾಗಿದ್ದು, ಕೇವಲ ನೀರಾವಿಯನ್ನು ಮಾತ್ರ ಹೊರಹಾಕುತ್ತದೆ. ಹೀಗಾಗಿ ಇದು ಸಂಪೂರ್ಣವಾಗಿ ಶೂನ್ಯ-ಉದ್ವಾರದ (Zero-emission) ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದೆ. ರೈಲಿನ ಸಂಚಾರಕ್ಕೆ ಅಗತ್ಯವಿರುವ ಗ್ರೀನ್ ಹೈಡ್ರೋಜನ್ ಅನ್ನು ಜಿಂದ್ನಲ್ಲಿಯೇ ಸ್ಥಾಪಿಸಲಾದ ಸುಸಜ್ಜಿತ ಘಟಕದಿಂದ ಪೂರೈಸಲಾಗುತ್ತದೆ. ಸುರಕ್ಷಿತ ಸಂಚಾರಕ್ಕಾಗಿ ಈ ಯೋಜನೆಯಲ್ಲಿ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಜರ್ಮನಿ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ಇಟಲಿ ಮತ್ತು ಅಮೆರಿಕ ಸೇರಿದಂತೆ ಕೆಲವೇ ಕೆಲವು ದೇಶಗಳಲ್ಲಿ ಹೈಡ್ರೋಜನ್ ರೈಲುಗಳನ್ನು ಬಳಸಲಾಗುತ್ತಿದೆ ಅಥವಾ ಪರೀಕ್ಷಿಸಲಾಗುತ್ತಿದೆ. ಈ ಉದ್ಘಾಟನೆಯೊಂದಿಗೆ ಹೈಡ್ರೋಜನ್ ಚಾಲಿತ ರೈಲು ತಂತ್ರಜ್ಞಾನವನ್ನು ಬಳಸುತ್ತಿರುವ ವಿಶ್ವದ ಬೆರಳೆಣಿಕೆಯ ಪ್ರಮುಖ ದೇಶಗಳ ಸಾಲಿಗೆ ಭಾರತವೂ ಹೆಜ್ಜೆಯಿಟ್ಟಿದೆ.
ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ವಚ್ಛ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ಭಾರತದ ಪ್ರಯತ್ನದಲ್ಲಿ ಈ ರೈಲು ಪ್ರಮುಖ ಮೈಲಿಗಲ್ಲಾಗಿದೆ.
ಈ 10 ಬೋಗಿಗಳ ಹೈಡ್ರೋಜನ್ ರೈಲು ಜಿಂದ್ ಮತ್ತು ಸೋನಿಪತ್ ನಡುವೆ ಸಂಚರಿಸಲಿದ್ದು, ಸುಮಾರು 90 ಕಿಲೋಮೀಟರ್ ದೂರವನ್ನು ತಲುಪಲು ಸುಮಾರು ಎರಡು ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಮಾರ್ಗದಲ್ಲಿ ಒಟ್ಟು 11 ತಂಗುದಾಣಗಳಿದ್ದು, ಪ್ರತಿದಿನ ಸುಮಾರು 2,600 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಸಂಪೂರ್ಣವಾಗಿ ದೇಶೀಯ ಹೈಡ್ರೋಜನ್ ಫ್ಯುಯಲ್ ಸೆಲ್ ತಂತ್ರಜ್ಞಾನವನ್ನು ಬಳಸಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಸಾಂಪ್ರದಾಯಿಕ ವಿದ್ಯುತ್ ಲೈನ್ಗಳ ಹಂಗಿಲ್ಲದೆ ಈ ರೈಲು ಚಲಿಸಲಿದೆ.
ರೈಲಿನ ದರ :
ರೈಲಿನ ಆರಂಭಿಕ ಪ್ರಯಾಣ ದರ ಕೇವಲ 5 ರೂಪಾಯಿಗಳಿಂದ ಪ್ರಾರಂಭವಾಗಲಿದ್ದು, ಗರಿಷ್ಠ ದರ 25 ರೂಪಾಯಿಗಳಾಗಿರಲಿದೆ. ಈ ಹೈಡ್ರೋಜನ್ ರೈಲು ಪ್ರಯಾಣಿಕರಿಗೆ ಅತ್ಯಂತ ಕಡಿಮೆ ವೆಚ್ಚದ ಪ್ರಯಾಣದ ಆಯ್ಕೆಯನ್ನು ಒದಗಿಸಲಿದ್ದು, ವಿಶೇಷವೆಂದರೆ, ಇದರ ಆರಂಭಿಕ ದರವು ಹಲವು ರೈಲು ನಿಲ್ದಾಣಗಳಲ್ಲಿ ನೀಡಲಾಗುವ ಪ್ಲಾಟ್ಫಾರ್ಮ್ ಟಿಕೆಟ್ ದರಕ್ಕಿಂತಲೂ ಕಡಿಮೆಯಾಗಿದೆ.
