ದಾವಣಗೆರೆ | ಜಿಮ್ ಮುಗಿಸಿ ಮನೆಗೆ ಬಂದ ಬಾಡಿ ಬಿಲ್ಡರ್ ಕುಸಿದು ಬಿದ್ದು ಸಾವು

ದಾವಣಗೆರೆ

ದಾವಣಗೆರೆ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ಬಾಡಿ ಬಿಲ್ಡರ್​​ವೊಬ್ಬರು ಜಿಮ್ ಮುಗಿಸಿ ಮನೆಗೆ ಬಂದ ಕೆಲ ಹೊತ್ತಲ್ಲೇ ದಿಢೀರ್​ ಕುಸಿದು ಬಿದ್ದು ಕೊನೆಯುಸಿರೆಳೆದ ಆಘಾತಕಾರಿ ಘಟನೆ ದಾವಣಗೆರೆಯ ಕೆ.ಟಿ.ಜಂಬಣ್ಣನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಕೆಟಿಜೆ ನಗರದ ನಿವಾಸಿ ಸುಶೀಲ್ ಕುಮಾರ್ (26) ಮೃತಪಟ್ಟ ಬಾಡಿ ಬಿಲ್ಡರ್. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿ ಗಳಿಸಿದ್ದ ಇವರು ಅಂತಾರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಂಗ್ ವೇದಿಕೆಗಳಿಗೆ ರೆಡಿಯಾಗುತ್ತಿದ್ದರು. ಈ ನಡುವೆ ಸುಶೀಲ್ ಕುಮಾರ್ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದು, ಹೃದಯಾಘಾತದ ಶಂಕೆ ವ್ಯಕ್ತವಾಗಿದೆ.

ಕಳೆದ ದಿನ ರಾತ್ರಿ 8-30 ಈ ಘಟನೆ ನಡೆದಿದ್ದು, ಜಿಮ್ ಮುಗಿಸಿಕೊಂಡು ಸುಶೀಲ್ ಮನೆಗೆ ಬಂದಿದ್ದರು. ತಲೆ ಸುತ್ತುತ್ತಿರುವುದಾಗಿ ಹೇಳಿದ ಕೆಲವೇ ಕ್ಷಣದಲ್ಲೇ ಕುಸಿದು ಬಿದ್ದಿದ್ದಾ‌ರೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ರಕ್ತದೊತ್ತಡ ಕಡಿಮೆಯಾಗಿ (ಲೋ ಬಿಪಿ) ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ವೈದ್ಯರು ಹೇಳಿದ್ದಾರೆ.

ಸುಶೀಲ್ ಕುಮಾರ್ ಅವರ ತಾಯಿ ದೇವಮ್ಮ ಜಿಲ್ಲಾಸ್ಪತ್ರೆಯಲ್ಲಿ ಡಿ ಗ್ರೂಪ್​ನಲ್ಲಿ ಕೆಲಸ ಮಾಡುತ್ತಿದ್ದು, ಮುಂದೆ ನನಗೆ ಆಸರೆ ಯಾರು ಎಂದು ಗೋಳಾಡುತ್ತಿರುವುದು ಎಲ್ಲರನ್ನೂ ಭಾವುಕರನ್ನಾಗಿಸಿತು.

Author