ಶಿವಮೊಗ್ಗ,ನಗರದ ಹಲವು ಸ್ಥಳಗಳನ್ನು ಗುರುತಿಸಿ, ನಗರ ಸಾರಿಗೆ ಬಸ್ಸುಗಳ ನಿಲುಗಡೆಗಾಗಿ ಅವಕಾಶ ನೀಡಲಾಗಿದೆ. ಆದಾಗ್ಯೂ ನಗರ ಸಂಚಾರಿ ಬಸ್ಸುಗಳ ಚಾಲಕರು ನಿಗಧಿತ ಬಸ್ಸ್ಟಾಪ್ಗಳಲ್ಲದೇ ಎಲ್ಲೆಂದರಲ್ಲಿ ಬಸ್ಸುಗಳನ್ನು ನಿಲ್ಲಿಸಿ, ಜನಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ನಿಗಧಿಪಡಿಸಿದ ಸ್ಥಳದಲ್ಲಿಯೇ ಬಸ್ಸುಗಳನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳು ನಗರ ಸಾರಿಗೆ ಬಸ್ಸುಗಳ ವಾಹನ ಚಾಲಕರಿಗೆ ಸೂಚಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಗರದ ಆಟೋರಿಕ್ಷಾ ಸಂಚಾರಿ ವ್ಯವಸ್ಥೆಯಲ್ಲಿ ನ್ಯೂನತೆಗಳು ಮತ್ತು ಪರಿಹಾರ ಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬಸ್ಸುಗಳ ನಿಲುಗಡೆ ಕುರಿತು ಬಸ್ಸುಗಳ ಚಾಲಕರಿಗೆ ಕೂಡಲೇ ಸೂಚನೆ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನೆರೆಯ ಜಿಲ್ಲೆಗಳಲ್ಲಿ ಆಟೋದರ ಪರಿಷ್ಕರಣೆ ಮಾಡಿರುವ ಮಾನದಂಡಗಳನ್ನು ತುಲನಾತ್ಮಕವಾಗಿ ಅವಲೋಕಿಸಿ, ಸಂಬಂಧಿಸಿದ ಪ್ರಾಧಿಕಾರಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ದರಪರಿಷ್ಕರಣೆ ಕುರಿತು ಕ್ರಮ ವಹಿಸಲಾಗುವುದು ಎಂದರು.
ರ್ಯಾಪಿಡೋ ಅಥವಾ ಅಂತಹ ಯಾವುದೇ ಸಂಸ್ಥೆಯು ಸಾರಿಗೆ ಸೇವೆ ಆರಂಭಿಸಿದಲ್ಲಿ ಸರ್ಕಾರದ ಮಾರ್ಗಸೂಚಿಯನುಸಾರ ಅನುಮತಿ ನೀಡಲಾಗುವುದು. ಮಾನ್ಯತೆ ಪಡೆಯದೇ, ದಾಖಲೆಗಳಿಲ್ಲದೆ ಅನಧಿಕೃತವಾಗಿ ವಾಹನ ಚಲಾಯಿಸುತ್ತಿದ್ದಲ್ಲಿ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದರು.

ಆಟೋ ಚಾಲಕರು ಯಾವುದೇ ಅವಘಡಗಳು ನಡೆಯದಂತೆ ವಿಶೇಷ ಕಾಳಜಿ ವಹಿಸಿ. ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬನ್ನಿ. ಶಾಲಾ ಮಕ್ಕಳ ಪ್ರಯಾಣದ ಸಂದರ್ಭದಲ್ಲಿ ಸಂಚಾರಿ ನಿಯಮಗಳನ್ನು ಅನುಸರಿಸಿ. ನಗರದಲ್ಲಿ 5665 ನೋಂದಾಯಿತ ಆಟೋಗಳಿವೆ. ಆಟೋದಲ್ಲಿ ಚಾಲಕ-ಮಾಲಕರ, ಪೊಲೀಸ್ ಇಲಾಖೆಯ ನೋಂದಣಿ ಹೊಂದಿರುವ ಮಾಹಿತಿ ಫಲಕವನ್ನು ತಮ್ಮ ಆಟೋದಲ್ಲಿ ಅಳವಡಿಸಿ. ಇದರಿಂದಾಗಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಆಟೋಗಳ ವಿಮೆಯನ್ನು ಕಾಲಕಾಲಕ್ಕೆ ನವೀಕರಿಸಿಕೊಳ್ಳಿ. ಮಾದಕ ವಸ್ತುಗಳ ಸಾಗಾಣಿಕೆಗೆ ಸಂಬಂಧಿಸಿದಂತೆ ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಸೌಹಾರ್ದ ಸಮಾಜ ನಿರ್ಮಾಣಕ್ಕೆ ಸಹಕರಿಸಿ. – ಬಿ.ನಿಖಿಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಶಿವಮೊಗ್ಗ.
ಈ ಸಂದರ್ಭದಲ್ಲಿ ಆಟೋಗಳ ಚಾಲಕರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ, ಶಿವಮೊಗ್ಗ ನಗರದಲ್ಲಿ ಜನಸಂಚಾರಕ್ಕಾಗಿ ರ್ಯಾಪಿಡೋ ಸಂಸ್ಥೆಯು ದ್ವಿಚಕ್ರ ವಾಹನ ಸೇವೆ ಆರಂಭಿಸಿದೆ. ರ್ಯಾಪಿಡೋ ಸಂಚಾರಿ ಮಾರ್ಗಸೂಚಿ ಬಿಡುಗಡೆ ಆಗುವವರೆಗೆ ಈ ವಾಹನಗಳು ರಸ್ತೆಗೆ ಇಳಿಸದಂತೆ ಸೂಚಿಸಿ. ರ್ಯಾಪಿಡೋ ವಾಹನಗಳ ಬಹುತೇಕ ಚಾಲಕರು ನಿಯಮಾನುಸಾರ ವಾಹನ ಚಾಲನಾ ಪರವಾನಿಗೆ ಹೊಂದಿರುವುದಿಲ್ಲ. ಇದರಿಂದಾಗಿ ಸಂಭಾವ್ಯ ಅವಘಡ, ಅನಾಹುತಗಳಿಗೆ ಜನಸಾಮಾನ್ಯರು ಬಲಿಯಾಗಬೇಕಾಗುತ್ತದೆ. ಅಲ್ಲದೇ ಬಹುಸಂಖ್ಯಾತ ಆಟೋ ಚಾಲಕರು ಆಟೋ ನಡೆಸುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.
ರ್ಯಾಪಿಡೋ ದ್ವಿಚಕ್ರ ವಾಹನಗಳಿಂದಾಗಿ ಆಟೋ ಚಾಲಕರ ಕುಟುಂಬದ ನಿರ್ವಹಣೆ ದುಸ್ತರವಾಗಿದೆ. ಆದ್ದರಿಂದ ಜನಸಾಮಾನ್ಯರಿಗೆ ಅನುಕೂಲಕ್ಕಿಂತ ಅನಾನುಕೂಲ ಉಂಟು ಮಾಡುವ ಈ ಸಂಚಾರ ಸೇವೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡಿದರು.
ಅಲ್ಲದೇ ಬಸ್ ಟಿಕೆಟ್ ದರ ಸೇರಿದಂತೆ ಹೋಟೆಲ್ ಆಹಾರ ಇನ್ನಿತರ ವಸ್ತುಗಳ ಬೆಲೆ ಏರಿಕೆಯಾಗಿದೆ. ಹಾಗೆಯೇ ಆಟೋರಿಕ್ಷಾ ಪ್ರಯಾಣದ ಕನಿಷ್ಠ ದರವನ್ನು 40 ರೂ.ನಿಂದ 50 ರೂ.ಗೆ ಏರಿಸಬೇಕು ಶಿವಮೊಗ್ಗ ನಗರ 4-5ಕಿ.ಮೀ. ವ್ಯಾಪ್ತಿಗೆ ಮಾತ್ರ ಸೀಮಿತವಾಗಿದ್ದು, ಪ್ರತಿನಿತ್ಯ ಸುಮಾರು 8000 ದಿಂದ 9000 ಆಟೋಗಳು ಸಂಚರಿಸುತ್ತಿವೆ. ನಗರದಲ್ಲಿ 10ಕಿ.ಮೀ.ಗೆ ಸೀಮಿತಗೊಳಿಸಲಾಗಿರುವ ಆಟೋ ಸಂಚಾರಿ ಪರವಾನಿಗೆಯನ್ನು 20ಕಿ.ಮೀ ವಿಸ್ತರಿಸಬೇಕು. ನಗರದ ಸರ್ಕಾರಿ ಮತ್ತು ಖಾಸಗಿ ಬಸ್ನಿಲ್ದಾಣಗಳ ಎದುರು ಪ್ರಯಾಣಿಕರನ್ನು ಇಳಿಸುವ ಸಂದರ್ಭದಲ್ಲಿ ನೋ ಪಾರ್ಕಿಂಗ್ ಏರಿಯಾ ಎಂದು ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ದಂಡವಿಧಿಸುತ್ತಿದ್ದಾರೆ. ಇಂತಹ ಸ್ಥಳಗಳಲ್ಲಿ ಪ್ರಯಾಣಿಕರು ಇಳಿದು ಹೋಗುವ ಅವಧಿಗೆ ವಿನಾಯಿತಿ ನೀಡುವಂತೆ ಆಟೋ ಚಾಲಕರು ಮನವಿ ಮಾಡಿದರು. ಪೊಲೀಸ್ ವರಿಷ್ಟಾಧಿಕಾರಿಗಳು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.
ನಗರ ಸಾರಿಗೆ ಬಸ್ಸುಗಳ ಚಾಲಕರು ತಮ್ಮ ಬಸ್ಸುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ, ಜನರನ್ನು ತುಂಬಿಕೊಂಡು ಹೋಗುತ್ತಿರುವುದರಿಂದ ಜನರು ಆಟೋ ರಿಕ್ಷಾ ಬಳಸಿ ಸಂಚರಿಸುವುದಕ್ಕೆ ಹಿನ್ನೆಡೆ ಆಗುತ್ತಿದೆ. ಅಂತಹ ವಾಹನಗಳ ವಾಹನ ಚಾಲಕರು ತಮಗೆ ನಿಗಧಿಪಡಿಸಿದ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲ್ಲಿಸುವಂತೆ ಸೂಚನೆ ನೀಡಬೇಕು. ರೋಗಿಗಳು, ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸಾಗಿಸುವ ಭರದಲ್ಲಿ ಕೆಲವು ಕಡೆಗಳಲ್ಲಿ ಸಿಗ್ನಲ್ ಜಂಪ್ ಆಗಿರುವ ಪ್ರಕರಣಗಳಲ್ಲಿ ಮಾನವೀಯ ನೆಲೆಯಲ್ಲಿ ವಿನಾಯಿತಿ ನೀಡಬೇಕು. – ಅಕ್ರಮ್ ಪಾಶಾ, ಕಾರ್ಯದರ್ಶಿ, ಆಟೋ ಚಾಲಕರ ಸಂಘ, ಶಿವಮೊಗ್ಗ.
ನಗರದ ರೈಲ್ವೆ ಸ್ಟೇಷನ್ನಲ್ಲಿ ರೈಲು ಬರುವುದು ಕೆಲವೊಮ್ಮೆ ವಿಳಂಬವಾದಾಗ ರೈಲ್ವೆ ನಿಲ್ದಾಣದಲ್ಲಿ ಆಟೋಗಳ ಚಾಲಕರು ಗ್ರಾಹಕರಿಗಾಗಿ ಕಾದಿರುತ್ತಾರೆ. ಅಂತಹ ಸಂದರ್ಭದಲ್ಲಿ ಪೊಲೀಸರು ಆಟೋಗಳನ್ನು ನಿಲ್ಲಿಸದಂತೆ ಬಿಗಿ ನಿಲುವು ತಳೆಯುತ್ತಾರೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗುತ್ತಿದೆ. ರೈಲು ವಿಳಂಬ ಬರುವ ಅಥವಾ ಹೊರಡುವ ಸಂದರ್ಭದಲ್ಲಿ ವಾಹನಗಳ ನಿಲುಗಡೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕು. ಇಲ್ಲಿಯೂ ಸಹ ಸಾರಿಗೆ ಬಸ್ಸುಗಳ ನಿಲುಗಡೆಗೆ ಅಕವಾಶ ನೀಡಿರುವುದರಿಂದ ಆಟೋ ಚಾಲಕರು ಪ್ರಯಾಣಿಕರಿಗಾಗಿ ಪರದಾಡುವಂತಾಗಿದೆ. – ಅಲ್ಲಾಭಕ್ಷ, ಆಟೋ ಚಾಲಕರ ಸಂಘದ ಅಧ್ಯಕ್ಷ.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಶಿರೋಳಕರ್, ರಾಜ್ಯ ರಸ್ತೆ ಸಾರಿಗೆ ನಿಗಮದ ನಿಯಂತ್ರಣಾಧಿಕಾರಿ ದಿನೇಶ್ ಸೇರಿದಂತೆ ಆಟೋ ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
