ದಾವಣಗೆರೆ: ಹರಿಹರ ಪೀಠದ ವಚನಾನಂದ ಸ್ವಾಮೀಜಿಗೆ ಪೋಕ್ಸೋ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ನಿರೀಕ್ಷಣಾ ಜಾಮೀನು ರದ್ದಾದ ಹಿನ್ನೆಲೆ ರೆಗ್ಯೂಲರ್ ಬೇಲ್ಗೆ ಅರ್ಜಿ ಸಲ್ಲಿಕೆ ಮಾಡಿದ್ದ ವಚನಾನಂದ ಅವರ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಪೋಕ್ಸೋ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ರಾಮನಾರಾಯಣ್ ಹೆಗ್ಗಡೆ ಅವರು ಷರತ್ತುಬದ್ಧ ಜಾಮೀನು ಪ್ರಕಟಿಸಿದ್ದಾರೆ.

ಮಠದಲ್ಲಿದ್ದ ಬಾಲಕನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ವಚನಾನಂದ ಶ್ರೀ ವಿರುದ್ಧ ಸಂತ್ರಸ್ತ ಬಾಲಕನ ತಾಯಿ ನೀಡಿದ ದೂರಿನ ಹಿನ್ನೆಲೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಠಾಣೆಯಲ್ಲಿ ಝೀರೋ ಎಫ್ಐಆರ್ ದಾಖಲಾಗಿತ್ತು.
ಬಳಿಕ ಹರಿಹರ ಗ್ರಾಮಾಂತರ ಠಾಣೆಗೆ ಪ್ರಕರಣ ವರ್ಗಾವಣೆ ಆಗಿತ್ತು. ಪ್ರಕರಣ ದಾಖಲಾಗುವ ಮುನ್ನವೇ ವಚನಾನಂದಶ್ರೀ ನಿರೀಕ್ಷಣಾ ಜಾಮೀನು ಪಡೆದಿದ್ದರು.
