ಉಡುಪಿ,ಹರಿಕಥಾ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಕಲಾವಿದೆ ಕ್ಷಮೆಯಾಚನೆ ಮಾಡಿದ್ದಾರೆ.
“ಜುಲೈ 11 ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಅಂಕಿತ ನಾಯ್ಕ ಮತ್ತು ಗೌರಿ ಪಾಂಡುರಂಗಿ ಎಂಬವರು ನಮ್ಮಿಂದ ಒಂದು ಗಂಟೆಯ ಭರತನಾಟ್ಯ ಕಾರ್ಯಕ್ರಮ ಮತ್ತು ಒಂದು ಗಂಟೆಯ ಹರಿವಾಣ ನೃತ್ಯ ಸೇವೆಯ ಕಾರ್ಯಕ್ರಮದ ಬಗ್ಗೆ ಅನುಮತಿ ಪಡೆದು ಕಾರ್ಯಕ್ರಮದ ನಡುವೆ “ಭಕ್ತ ಪ್ರಹ್ಲಾದ” ಎಂಬ ಹರಿಕಥಾ ಕಾರ್ಯಕ್ರಮವನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು ನಮ್ಮ ಗಮನಕ್ಕೆ ಬಂದಿರುತ್ತದೆ.

ಇದರ ಬಗ್ಗೆ ಅಂಕಿತ ನಾಯ್ಕ ಮತ್ತು ಗೌರಿ ಪಾಂಡುರಂಗಿ ಸಾರ್ವಜನಿಕವಾಗಿ ಕ್ಷಮಾಪಣೆಯನ್ನು ಕೇಳಲು ಸೂಚಿಸಿದ್ದು ವಿಡಿಯೋದ ಮೂಲಕ ಕ್ಷಮೆ ಯಾಚಿಸಿದ್ದಾಳೆ. ಈ ಅನಪೇಕ್ಷಿತ ಘಟನೆಯ ಬಗ್ಗೆ ಶ್ರೀಮಠವು ತೀವ್ರ ವಿಷಾದವನ್ನು ವ್ಯಕ್ತ ಪಡಿಸುತ್ತದೆ ಎಂದು ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಹರಿಕಥಾ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಗ್ಗೆ ಶಂಕರಾಚಾರ್ಯರ ಪೀಠಗಳ ಅನುಯಾಯಿಗಳು ಸೇರಿ ಅನೇಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
