ಸಿಎಂ ಸಿದ್ದರಾಮಯ್ಯರಿಂದ ರಾಜೀನಾಮೆ ನಿರ್ಧಾರ ಘೋಷಣೆ..!

ರಾಜಕೀಯ

ಬೆಂಗಳೂರು, ಮುಖ್ಯಮಂತ್ರಿ ಕುರ್ಚಿ ಬದಲಾವಣೆ ಚರ್ಚೆಯ ಮಧ್ಯೆ ಕಾಂಗ್ರೆಸ್​ ಹೈಕಮಾಂಡ್​ ಸೂಚನೆಯಂತೆ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ.ಶಿವಕುಮಾರ್​ ಹಾಗೂ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಉಪಹಾರ ಸಭೆ ನಡೆಸಿದರು.

ಸರ್ಕಾರಿ ನಿವಾಸ ಕಾವೇರಿಯಲ್ಲಿ ಈ ಸಭೆಯಲ್ಲಿ, ತಾವು ಸಿಎಂ ಹುದ್ದೆಯಿಂದ ಕೆಳಗಿಳಿಯುವುದಾಗಿ ಅವರು ಪ್ರಕಟಿಸಿದರು.

ಮಂಗಳವಾರ ದೆಹಲಿಯಲ್ಲಿ ನಡೆದ ಹೈಕಮಾಂಡ್ ನೇತೃತ್ವದ ಸಭೆಯಲ್ಲಿ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಕ್ಕೆ ಸಮ್ಮತಿಸಿದ್ದರು. ರಾಹುಲ್ ಗಾಂಧಿಯವರಿಂದಲೇ ಸಂದೇಶ ಬಂದಿದ್ದರಿಂದ ರಾಜೀನಾಮೆ ನೀಡಲು ನಿರ್ಧರಿಸಿದರು ಎಂದು ಮೂಲಗಳು ಹೇಳಿವೆ.

ಬ್ರೇಕ್​ಫಾಸ್ಟ್​ ಸಭೆಯಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಚರ್ಚೆ ನಡೆಯಿತು. ಸುಗಮ ಅಧಿಕಾರ ಹಸ್ತಾಂತರ ನಿಟ್ಟಿನಲ್ಲಿ, ಒಗ್ಗಟ್ಟಿನ ಸಂದೇಶ ಸಾರಲು ಹಾಗೂ ಪರಸ್ಪರ ವಿಶ್ವಾಸ ಮೂಡಿಸಲು ಉಭಯ ನಾಯಕರ ಬ್ರೇಕ್ ಫಾಸ್ಟ್ ಸಭೆ ಆಯೋಜನೆಯಾಗಿತ್ತು.ಉಪಹಾರ ಕೂಟದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹಸಚಿವ ಜಿ.ಪರಮೇಶ್ವರ್​, ಸಚಿವರಾದ ಎಂ.ಸಿ.ಸುಧಾಕರ್, ಬೈರತಿ ಸುರೇಶ್, ಸಂತೋಷ್ ಲಾಡ್, ಸಚಿವ ರಾಮಲಿಂಗ ರೆಡ್ಡಿ ಇತರರು ಭಾಗವಹಿಸಿದ್ದರು.

ಸಚಿವರ ಉಪಹಾರ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಸಿದ್ದರಾಮಯ್ಯ ಪ್ರಕಟಿಸಿದರು. ದೆಹಲಿಯಲ್ಲಿ ಹೈಕಮಾಂಡ್ ಜೊತೆ ನಡೆದ ಸಭೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರೊಂದಿಗೆ ಸಂಕ್ಷಿಪ್ತ ಮಾಹಿತಿಯನ್ನು ಹಂಚಿಕೊಂಡರು.

ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಿದ್ದರಾಮಯ್ಯ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಸಚಿವರೊಂದಿಗೆ ನಡೆದ ಉಪಹಾರ ಸಭೆಯಲ್ಲಿ ಸಿದ್ದರಾಮಯ್ಯ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವರಿಗೆ ಸಿಎಂ ಸಿಂಪಲ್​ ಉಪಹಾರ ಕೂಟ

ಸಿಎಂ ಅಕ್ಕಪಕ್ಕದಲ್ಲೇ ಕುಳಿತ ಡಿಕೆಶಿ, ಪರಮೇಶ್ವರ್​ಸಚಿವರುಗಳಿಗೆ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಸಿಂಪಲ್ ಉಪಹಾರ ಕೂಟ ಏರ್ಪಡಿಸಿದ್ದರು. ಬ್ರೇಕ್ ಫಾಸ್ಟ್ ಮೆನುದಲ್ಲಿ ಇಡ್ಲಿ, ವಡೆ, ಸಾಂಬಾರ್, ಉಪ್ಪಿಟ್ಟು, ರೈಸ್ ಬಾತ್ ಇದ್ದವು.ಸಿಎಂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಸಚಿವರಿಗೆ ಉಪಹಾರ ಆಯೋಜಿಸಿದ್ದು, ಅವರ ಎಡ ಹಾಗೂ ಬಲಭಾಗದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಕುಳಿತಿದ್ದರು.ಸಿದ್ದರಾಮಯ್ಯ ಅವರು ಜಿ.ಪರಮೇಶ್ವರ್ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡರು.

ಸಿಎಂ ಹುದ್ದೆಯ ರೇಸ್​ನಲ್ಲಿ ಮುಂಚೂಣಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಇದ್ದು, ಗೃಹ ಸಚಿವ ಪರಮೇಶ್ವರ್ ಅವರ ಹೆಸರಿನ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಸಿದ್ದರಾಮಯ್ಯ ಕಾಲು ಮುಟ್ಟಿ ಆಶೀರ್ವಾದ ಪಡೆದ ಡಿಕೆಶಿಉಪಹಾರ ಕೂಟದಲ್ಲಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಮುಖಾಮುಖಿಯಾದರು. ಡಿಕೆಶಿ ಅವರನ್ನು ಸಿಎಂ ಸಿದ್ದರಾಮಯ್ಯ ಆತ್ಮೀಯವಾಗಿ ಬರ ಮಾಡಿಕೊಂಡರು.

ಈ ವೇಳೆ, ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಕಾಲು ಮುಟ್ಟಿ ಆಶೀರ್ವಾದ ಪಡೆದರು.ಇದೇ ವೇಳೆ, ಊಭಯ ನಾಯಕರು ಪರಸ್ಪರ ಆಲಂಗಿಸಿ ಕುಶಲೋಪರಿ ವಿಚಾರಿಸಿದರು. ನಾಯಕತ್ವ ಬದಲಾವಣೆ ಮಧ್ಯೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಆತ್ಮೀಯತೆ ಕ್ಷಣ ಗಮನ ಸೆಳೆಯುತ್ತಿದೆ.

Author