ಶಿವಮೊಗ್ಗ | ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರು ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಜಂಟಿ ಆಪರೇಷನ್ ಫುಟ್ ಪಾತ್ ತೆರವು ಕಾರ್ಯಾಚರಣೆ ಯಶಸ್ವಿ

ಶಿವಮೊಗ್ಗ

ಶಿವಮೊಗ್ಗ, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಂಚಾರಿ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ನೆನ್ನೆ ದಿನಾಂಕ 29-04-2026 ರಂದು ನಗರದ ಅಲ್ಕೋಳ ಸರ್ಕಲ್‌ನಿಂದ ಡಿ.ವಿ.ಜಿ. ಸರ್ಕಲ್‌ವರೆಗೆ ಇರುವ ದಿ.ಶ್ರೀ ಎಸ್. ಬಂಗಾರಪ್ಪ ರಸ್ತೆಯಲ್ಲಿ, ಸಾರ್ವಜನಿಕ ವಾಹನಗಳು ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ರಸ್ತೆ ಎರಡೂ ಬದಿಗಳ ಪುಟ್‌ಪಾತ್ ಹಾಗೂ ರಸ್ತೆ ಮೇಲಿಟ್ಟಿದ್ದ ತಿಂಡಿ ಗಾಡಿಗಳು ಮತ್ತು ಹಣ್ಣಿನ ಅಂಗಡಿಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳ ಸಹಕಾರದೊಂದಿಗೆ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಆದಾಗ್ಯೂ, ಒಂದೆರಡು ತಿಂಡಿ ಗಾಡಿ ಮಾಲೀಕರು ಪುನಃ ರಸ್ತೆ ಹಾಗೂ ಪುಟ್‌ಪಾತ್ ಮೇಲೆ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದ್ದರಿಂದ, ಅವರಿಗೆ ಸೂಕ್ತ ತಿಳುವಳಿಕೆ ನೀಡಿ ಇಂದು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ .

ಇದೇ ಸಂದರ್ಭದಲ್ಲಿ, ಎಲ್ಲಾ ಪುಟ್‌ಪಾತ್ ವ್ಯಾಪಾರಸ್ಥರಿಗೆ ಪರ್ಯಾಯ ಸ್ಥಳವನ್ನು ನಿಗದಿಪಡಿಸಿ, ಆ ಸ್ಥಳದಲ್ಲಿ ಸ್ಥಳೀಯ ನಿವಾಸಿಗಳ ಸಂಚಾರಕ್ಕೆ ತೊಂದರೆಯಾಗದಂತೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಸತತವಾಗಿ ಒಂದೆರಡು ತಿಂಗಳಿಂದ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರು ತಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕರಾದ ದೇವರಾಜ್ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪರಿಶ್ರಮದ ಸಹಕಾರದ ಫಲ ಕಾರ್ಯಾಚರಣೆಯಿಂದಾಗಿ ಆಲ್ಕೋಳ ವೃತ್ತದಿಂದ ಬಂಗಾರಪ್ಪ ರಸ್ತೆ ಹಾಗೂ ಡಿವಿಜಿ ವೃತ್ತದವರೆಗೂ ಈ ರಸ್ತೆಯಲ್ಲಿ ಆಪರೇಷನ್ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಯಶಸ್ವಿಯಾಗಿದೆ.

ಈ ಒಂದು ಕಾರ್ಯಾಚರಣೆಯಲ್ಲಿ ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ, ಅಧಿಕಾರಿಗಳು, ಸಿಬ್ಬಂದಿಗಳು , ಪಶ್ಚಿಮ ಸಂಚಾರಿ ಠಾಣೆ ಪಿ.ಎಸ್ಐ ಸಪ್ನಾ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಈ ಯಶಸ್ವಿ ಕಾರ್ಯಾಚರಣೆಗೆ ಬಡಾವಣೆಯ ನಿವಾಸಿಗಳು, ಸ್ಥಳೀಯರು, ನಗರದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಫುಟ್ ಪಾತ್ ನಲ್ಲಿ ಪಾದಚಾರಿಗಳ ಓಡಾಟಕ್ಕೆ ಅನುಕೂಲ ಕಲ್ಪಿಸಿಕೊಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕವಾಗಿ ಪ್ರಶಂಸೆ ಸಹಜ ಜೊತೆಗೆ ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿರುವ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಹಾಗೂ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರ ಅವಿರತ ಶ್ರಮದಿಂದ ನಗರದಲ್ಲಿ ಬದಲಾವಣೆ ಪರ್ವ ಪ್ರಾರಂಭವಾಗಿರುವುದು ನಗರದ ಪ್ರಜ್ಞಾವಂತ ನಾಗರಿಕರಲ್ಲಿ, ಸಾರ್ವಜನಿಕರಲ್ಲಿ ಅಧಿಕಾರಿಗಳ ಬಗ್ಗೆ ಹೆಮ್ಮೆಯ, ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ.

Author