ಮದುವೆ ದಿನವೇ ಯುವತಿ ಪರಾರಿ!

ಉತ್ತರ ಕನ್ನಡ

ಶಿರಸಿ, ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಆತಂಕದ ಛಾಯೆ ಆವರಿಸಿದೆ. ಹಸಮಣೆ ಏರುವ ಕ್ಷಣಕ್ಕೆ ಸಿದ್ಧತೆ ನಡೆದಿದ್ದ ನಡುವೆಯೇ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪರಾರಿಯಾಗಿರುವ ಘಟನೆ ಶಿರಸಿಯಲ್ಲಿ ಬೆಳಕಿಗೆ ಬಂದಿದೆ.

ಮುಸ್ಲಿಂ ಗಲ್ಲಿಯ ನಿವಾಸಿ ಸಫಾ ಅಫ್ಜಲ್ ಖಾನ್ (25) ನಾಪತ್ತೆಯಾದ ಯುವತಿ. ಕೆಲದಿನಗಳ ಹಿಂದೆ ಇಂದಿರಾನಗರದ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗದಲ್ಲಿರುವ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.ಅದರಂತೆ ಎಪ್ರಿಲ್ 25 ರಂದು ಕರೆಗುಂಡಿ ರಸ್ತೆಯ ಎವರ್‌ಗ್ರೀನ್ ಗಾರ್ಡನ್‌ನಲ್ಲಿ ಮದುವೆ ಸಮಾರಂಭವನ್ನು ಭರ್ಜರಿಯಾಗಿ ಆಯೋಜಿಸಲಾಗಿತ್ತು.

ಎರಡೂ ಕುಟುಂಬಗಳೂ ಮದುವೆ ಸಂಭ್ರಮದಲ್ಲಿದ್ದ ಸಂದರ್ಭದಲ್ಲೇ, ಅದೇ ದಿನ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಯುವತಿ ತನ್ನ ಮನೆಯಿಂದ ಪರಾರಿಯಾಗಿದ್ದಾಳೆ.

ಮುಂಜಾನೆ 1:00 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಯುವತಿ, 4:00 ಗಂಟೆಯ ಹೊತ್ತಿಗೆ ತನ್ನ ಕೋಣೆಯಲ್ಲಿ ಕಂಡುಬಂದಿಲ್ಲ. ಪರಿವಾರದವರು ಮತ್ತು ಸಂಬಂಧಿಕರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಯುವತಿಯ ಸುಳಿವು ಸಿಗದ ಕಾರಣ ಯುವತಿಯ ಚಿಕ್ಕಪ್ಪ ಜಹೀರಾ ಖಾನ್ ಅವರು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದರು.

ನಾಪತ್ತೆಯಾದ ಯುವತಿಯ ಚಹರೆ

ನಾಪತ್ತೆಯಾದ ಕುಮಾರಿ ಸಫಾ ಅಫ್ಜಲ್ ಖಾನ್ 25 ವರ್ಷ ಪ್ರಾಯದವಳಾಗಿದ್ದು, ಸುಮಾರು 5 ಅಡಿ 2 ಇಂಚು ಎತ್ತರವಿದ್ದಾಳೆ. ಸದೃಢ ಮೈಕಟ್ಟು, ದುಂಡು ಮುಖ ಹಾಗೂ ಗೋಧಿ ಮೈಬಣ್ಣ ಹೊಂದಿರುವ ಈಕೆ ಕನ್ನಡ, ಹಿಂದಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತನಾಡಬಲ್ಲಳು. ಮನೆಯಿಂದ ಹೋಗುವಾಗ ಹೂವಿನ ಬಣ್ಣದ ನೈಟ್ ಡ್ರೆಸ್ ಮತ್ತು ಮೇಲೆ ಕಪ್ಪು ಬಣ್ಣದ ಬುರ್ಕಾ ಧರಿಸಿದ್ದಾಳೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಪರಾರಿಯಾದ ಯುವತಿ ಸಿಸಿ ಕ್ಯಾಮೆರಾದಲ್ಲಿ ಪತ್ತೆ:

ಯುವತಿ ಪರಾರಿಯಾಗಿರುವುದನ್ನು ತಿಳಿದ ನಂತರ ಯುವತಿಯ ಪಾಲಕರು ಮತ್ತು ಯುವಕನ ಪಾಲಕರು ಇಬ್ಬರೂ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಷೇಪ್ರ ಕಾರ್ಯಾಚರಣೆ ನಡೆಸಿ, ನಗರದಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮೀನುಮಾರುಕಟ್ಟೆ ಬಳಿಯಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಯುವತಿ ತೆರಳುತ್ತಿರುವ ದೃಶ್ಯ ದಾಖಲಾಗಿದೆ ಎನ್ನಲಾಗುತ್ತಿದೆ.

ಮದುವೆ ಊಟ ವ್ಯರ್ಥ:

ಮದುವೆ ಸಮಾರಂಭದ ಪ್ರಯುಕ್ತ ಬಂಧು-ಬಳಗದವರಿಗಾಗಿ ಯುವಕನ ಮನೆಯವರು ಕ್ವಿಂಟಲ್‌ಗಳಷ್ಟು ಮಟನ್, ಚಿಕನ್ ಊಟಕ್ಕೆ ಸಿದ್ಧತೆ ಕೈಗೊಂಡು ಸುಮಾರು 20ಕ್ಕೂ ಅಧಿಕ ಕುರಿಯನ್ನು ಕಟ್ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಹಸಮಣೆ ಏರಬೇಕಿದ್ದ ವಧು ಪರಾರಿಯಾಗಿರುವ ಕಾರಣ ಎಲ್ಲವೂ ವ್ಯರ್ಥವಾಗಿದೆ.

ಈ ಪ್ರಕರಣವನ್ನು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪೊಲೀಸರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಯುವತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ.

Author