ರಾಯಚೂರು, ಮಂತ್ರಾಲಯಕ್ಕೆ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ಗೂಡ್ಸ್ ವಾಹನ ಹಾಗೂ ಫ್ಲೈಆಶ್ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ರಾಜ್ಯದ 8 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಹತ್ತಿರದ ಚಿಲಕನಡೋನ ಗ್ರಾಮದ ಬಳಿ ಗುರುವಾರ ಬೆಳಗಿನ ಜಾವ ಘಟನೆ ನಡೆದಿದೆ.
ಮಂತ್ರಾಲಯದ ರಾಯರ ದರ್ಶನಕ್ಕಾಗಿ ಚಿಕ್ಕಮಗಳೂರಿನಿಂದ ಮಂತ್ರಾಲಯಕ್ಕೆ ಬರುತ್ತಿದ್ದ ಗೂಡ್ಸ್ ವಾಹನ ಹಾಗೂ ಬೀದರ್ನಿಂದ ತುಮಕೂರಿಗೆ ತೆರಳುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಬೆಳಗಿನ ಜಾವ ಸುಮಾರು 4 ಗಂಟೆ ವೇಳೆಗೆ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಕುಮಾರ್ (50), ದೀಪಿಕಾ (42), ಸುನಿಲ್ (40), ಯಶೋಧಮ್ಮ (60), ಪುಟ್ಟಮ್ಮ (55), ಬೆಳ್ಳಿ (3), ಲೋಲಾಕ್ಷಿ ಹಾಗೂ ಮೀನಾಕ್ಷಿ ಎಂಬವರು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಮೃತರಲ್ಲಿ ಐವರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಮೂರು ವರ್ಷದ ಮಗು ಸೇರಿದೆ. 7 ಮಂದಿ ತೀವ್ರ ಗಾಯಗೊಂಡಿದ್ದು, ಅವರನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದ ನಾಲ್ವರು ಎಮ್ಮಿಗನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹಾಸನ ಹಾಗೂ ಚಿಕ್ಕಮಗಳೂರು ಮೂಲದ ಒಟ್ಟು 18 ಮಂದಿ ಗೂಡ್ಸ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಅಪಘಾತದ ರಭಸಕ್ಕೆ ಜನರಿದ್ದ ಗೂಡ್ಸ್ ವಾಹನದ ಎದುರುಗಡೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಲ್ಲದೇ, ಲಾರಿ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಜಾಗದಲ್ಲಿ ಪಲ್ಟಿಯಾಗಿದೆ.

ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಎಮ್ಮಿಗನೂರು ಡಿವೈಎಸ್ಪಿ ಭಾರ್ಗವಿ, ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಘಟನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿವೈಎಸ್ಪಿ ಭಾರ್ಗವಿ, ”ಎಮ್ಮಿಗನೂರು ಸಬ್ ಡಿವಿಷನ್ ವ್ಯಾಪ್ತಿಯ ಧರ್ಮಪುರಂ ಟೋಲ್ ಪ್ಲಾಜಾ ದಾಟಿದ ನಂತರ, ಅಂದಾಜು 10-12 ಕಿಲೋಮೀಟರ್ ದೂರದ ಚಿಲಕಲಡೋನ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 167ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಬೀದರ್ನಿಂದ ತುಮಕೂರಿಗೆ ತೆರಳುತ್ತಿದ್ದ ಫ್ಲೈಆಶ್ (Fly-ash) ಲಾರಿ ಹಾಗೂ ಎದುರು ದಿಕ್ಕಿನಿಂದ ಮಂತ್ರಾಲಯದ ಕಡೆಗೆ ಬರುತ್ತಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನನ ನಡುವೆ ಡಿಕ್ಕಿಯಾಗಿದೆ.
ಈ ಅಪಘಾತದಲ್ಲಿ ಒಟ್ಟು 8 ಜನರು ಸಾವನ್ನಪ್ಪಿದ್ದಾರೆ. ಇನ್ನುಳಿದ ಏಳು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ, ಇತರ ನಾಲ್ವರು ಎಮ್ಮಿಗನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಒಬ್ಬರು ಸುರಕ್ಷಿತವಾಗಿದ್ದಾರೆ. ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ತನಿಖೆಯ ಬಳಿಕ ತಿಳಿಯಲಿದೆ” ಎಂದು ಮಾಹಿತಿ ನೀಡಿದರು.


