ಶಿವಮೊಗ್ಗ | ಹಾಲಿನ ದರ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಬಿಜೆಪಿ ಆಗ್ರಹ

ಶಿವಮೊಗ್ಗ

ಶಿವಮೊಗ್ಗ, ಹಾಲಿನ ದರ ಏರಿಕೆ ನಿರ್ಧಾರವನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಶಿವಮೊಗ್ಗ ನಗರ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಹಾಲಿನ ದರ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದರು.

ಹಾಲು ಪ್ರತಿಯೊಂದು ಕುಟುಂಬದ ನಿತ್ಯ ಬಳಕೆಯ ಅಗತ್ಯ ವಸ್ತುವಾಗಿದೆ. ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಲಿನ ದರ ಹೆಚ್ಚಿಸಿರುವುದು ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು ಹಾಗೂ ರೈತ ಕುಟುಂಬಗಳ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಉಂಟುಮಾಡಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹಾಲಿನ ದರ ಏರಿಕೆಯಿಂದ ಮಕ್ಕಳ ಪೌಷ್ಟಿಕ ಆಹಾರದ ಮೇಲೂ ಪರಿಣಾಮ ಬೀರಲಿದೆ. ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುವ ಕುಟುಂಬಗಳಿಗೆ ಪ್ರತಿನಿತ್ಯ ಹಾಲು ಖರೀದಿಸುವುದೇ ಹೊರೆಯಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಹಾಲು ಉತ್ಪಾದಕರು, ರೈತರು ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಬೇಕಾದ ಸರ್ಕಾರವೇ ಜನಸಾಮಾನ್ಯರಿಗೆ ಹೊರೆಯಾಗುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡರು ಟೀಕಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಚೆನ್ನಬಸಪ್ಪ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಲಿನ ದರ ಹೆಚ್ಚಿಸುವ ಬದಲು ಸರ್ಕಾರದ ಬೊಕ್ಕಸದಿಂದ ರೈತರಿಗೆ ನೆರವು ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತದ ಸಂದರ್ಭದಲ್ಲಿ ಹಾಲಿನ ದರ ಹೆಚ್ಚಿಸಬೇಕೇ ಅಥವಾ ಬೇಡವೇ ಎಂಬ ಚರ್ಚೆ ನಡೆದಿತ್ತು. ಆ ಸಂದರ್ಭದಲ್ಲಿ ರೈತರಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಜನಸಾಮಾನ್ಯರ ಮೇಲೆ ಹಾಲಿನ ದರ ಹೆಚ್ಚಳದ ಹೊರೆ ಹಾಕದೆ, ರಾಜ್ಯ ಸರ್ಕಾರದ ಬೊಕ್ಕಸದಿಂದ ರೈತರಿಗೆ ಹಣ ನೀಡುವ ಕೆಲಸ ಮಾಡಲಾಗಿತ್ತು ಎಂದರು.

ರೈತರ ಖಾತೆಗಳಿಗೆ ಹಣ ಜಮೆ ಮಾಡುವ ಮೂಲಕ ಅವರ ಹಿತಾಸಕ್ತಿ ಕಾಪಾಡುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡಿತ್ತು. ರೈತರ ರಕ್ಷಣೆಗೆ ಮತ್ತು ಅವರ ಆರ್ಥಿಕ ನೆರವಿಗೆ ಸರ್ಕಾರದ ಸಂಪನ್ಮೂಲ ಬಳಸುವ ನಿಲುವನ್ನು ಬಿಜೆಪಿ ಅನುಸರಿಸಿತ್ತು ಎಂದು ತಿಳಿಸಿದರು.

ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಹಾಲಿನ ದರ ಹೆಚ್ಚಿಸುವ ಮೂಲಕ ಗ್ರಾಹಕರ ಮೇಲೆ ಹೊರೆ ಹಾಕುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಟ್ಟು ನಾಲ್ಕು ಬಾರಿ ಹಾಲಿನ ದರ ಹೆಚ್ಚಿಸಿದ್ದು, ಒಟ್ಟಾರೆ ₹17 ಹೆಚ್ಚಳ ಮಾಡಿರುವುದಾಗಿ ಚೆನ್ನಬಸಪ್ಪ ಆರೋಪಿಸಿದರು.ರೈತರ ಹಿತಾಸಕ್ತಿ ಕಾಪಾಡುವ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುವುದು ಸರಿಯಲ್ಲ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಹಾಲಿನ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸಾಮಾನ್ಯ ಜನರ ದೈನಂದಿನ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಹಾಲಿನ ದರ ಏರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರೈತರು ಮತ್ತು ಗ್ರಾಹಕರಿಬ್ಬರ ಹಿತಾಸಕ್ತಿಯನ್ನೂ ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಚ್. ಮಾಲತೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಸುರೇಖಾ ಮುರಳಿಧರ್, ನವುಲೆ ಮಂಜುನಾಥ್, ಪ್ರಭು, ಲಕ್ಷ್ಮೀ ಶ್ರೀನಿವಾಸ್, ವೀಣಾ ನಾಗರಾಜ್, ಯಶೋದಾ, ಅನ್ನಪೂರ್ಣ, ರೋಹಿಣಿ, ಶ್ರೀನಾಗ್ ಸೇರಿದಂತೆ ಜನಪ್ರತಿನಿಧಿಗಳು, ನಗರ ಸಮಿತಿಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಶಕ್ತಿಕೇಂದ್ರದ ಪ್ರಮುಖರು ಭಾಗವಹಿಸಿದ್ದರು.ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಹಾಲಿನ ದರ ಏರಿಕೆ ನಿರ್ಧಾರವನ್ನು ಹಿಂಪಡೆದು ಜನಸಾಮಾನ್ಯರ ಹಿತಾಸಕ್ತಿ ಕಾಪಾಡುವಂತೆ ಆಗ್ರಹಿಸಿದರು.

Author