ಶಿವಮೊಗ್ಗ | ನವೆಂಬರ್ 21 ರಿಂದ ಸ್ಟಾರ್ ಏರ್ ವಿಮಾನ ಬುಕಿಂಗ್ ಸ್ಥಗಿತ: ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಆತಂಕ

ಶಿವಮೊಗ್ಗ

ಶಿವಮೊಗ್ಗ / ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣಗಳ ಬಳಿಕ ಅತಿ ಹೆಚ್ಚು ಪ್ರಯಾಣಿಕರನ್ನು ಸೆಳೆದು ಉತ್ತಮ ವಿಮಾನಯಾನ ಸೇವೆಯ ಮೂಲಕ ಗಮನ ಸೆಳೆದಿದ್ದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ.

ಹೈದರಾಬಾದ್, ತಿರುಪತಿ ಹಾಗೂ ಗೋವಾ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸ್ಟಾರ್ ಏರ್ ಸಂಸ್ಥೆಯು ಇದೇ ನವೆಂಬರ್ 20 ರಂದು ತನ್ನ ಸೇವೆಯನ್ನು ಕೊನೆಗೊಳಿಸುತ್ತಿದ್ದು, ನವೆಂಬರ್ 21 ರಿಂದ ಮುಂದಿನ ದಿನಗಳ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ. ಈ ಹಿಂದೆ ಇಂಡಿಗೋ ಹಾಗೂ ಸ್ಪೈಸ್ ಜೆಟ್ ಸಂಸ್ಥೆಗಳು ತಮ್ಮ ಸೇವೆಯನ್ನು ನಿಲ್ಲಿಸಿದ್ದವು. ಇದೀಗ ಸ್ಟಾರ್ ಏರ್ ಕೂಡ ಹಾರಾಟ ನಿಲ್ಲಿಸುವ ಸಾಧ್ಯತೆ ಇರುವುದರಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆ ಸಂಪೂರ್ಣವಾಗಿ ನಿಲ್ಲುವ ಭೀತಿ ಎದುರಾಗಿದೆ.

ಬೆಂಗಳೂರು ಹಾಗೂ ಶಿವಮೊಗ್ಗ ನಡುವೆ ಇಂಡಿಗೋ ಸಂಸ್ಥೆ ವಿಮಾನಯಾನ ಆರಂಭಿಸಿತ್ತು. ಹಾಗೆಯೇ ಚೆನ್ನೈ ಮತ್ತು ಹೈದರಾಬಾದ್ ಸಂಪರ್ಕವನ್ನು ಸ್ಪೈಸ್ ಜೆಟ್ ಒದಗಿಸುತ್ತಿತ್ತು. ಇವುಗಳ ಜೊತೆಗೆ ಸ್ಟಾರ್ ಏರ್ ಸಂಸ್ಥೆಯು ಹೈದರಾಬಾದ್, ತಿರುಪತಿ ಮತ್ತು ಗೋವಾ ನಗರಗಳಿಗೆ ವಿಮಾನ ಹಾರಾಟ ನಡೆಸುತ್ತಿದ್ದ ಕಾರಣ ಶಿವಮೊಗ್ಗ ವಿಮಾನ ನಿಲ್ದಾಣವು ನಿತ್ಯವೂ ಪ್ರಯಾಣಿಕರಿಂದ ತುಂಬಿರುತ್ತಿತ್ತು. ಕೇವಲ ಅಲ್ಪಾವಧಿಯಲ್ಲಿಯೇ ಈ ನಿಲ್ದಾಣವು ಪ್ರಯಾಣಿಕರ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ, ತಾಂತ್ರಿಕ ಕಾರಣಗಳನ್ನು ನೀಡಿ ಇಂಡಿಗೋ ಮತ್ತು ಸ್ಪೈಸ್ ಜೆಟ್ ಸಂಸ್ಥೆಗಳು ಈಗಾಗಲೇ ತಮ್ಮ ಸೇವೆಯನ್ನು ನಿಲ್ಲಿಸಿವೆ.

ಇದೀಗ ಉಡಾನ್ ಯೋಜನೆಯ ಅಡಿಯಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದದ ಅವಧಿ ಮುಕ್ತಾಯವಾಗುತ್ತಿರುವ ಕಾರಣ ಸ್ಟಾರ್ ಏರ್ ಕೂಡ ತನ್ನ ಬುಕಿಂಗ್ ಸೇವೆಯನ್ನು ನಿಲ್ಲಿಸಿದೆ.ಶಿವಮೊಗ್ಗದಿಂದ ನಿತ್ಯ ಹೈದರಾಬಾದ್ ನಗರಕ್ಕೆ ಶೇಕಡ 80 ರಷ್ಟು ಹಾಗೂ ತಿರುಪತಿಗೆ ಶೇಕಡ 60 ರಷ್ಟು ಆಸನಗಳು ಭರ್ತಿಯಾಗುತ್ತಿದ್ದವು. ಇದರ ಜೊತೆಗೆ ಚಳಿಗಾಲ ಮತ್ತು ಬೇಸಿಗೆಯ ಅವಧಿಯಲ್ಲಿ ಗೋವಾ ರಾಜ್ಯಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದರು.

ಕೇವಲ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ನೆರೆಯ ಉತ್ತರ ಕನ್ನಡ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆಗಳ ಜನರಿಗೂ ಈ ವಿಮಾನ ನಿಲ್ದಾಣ ಅತ್ಯಂತ ಅನುಕೂಲಕರವಾಗಿತ್ತು. ಈಗ ಏಕಾಏಕಿ ಬುಕಿಂಗ್ ಸ್ಥಗಿತಗೊಂಡಿರುವುದು ಈ 7 ಜಿಲ್ಲೆಗಳ ಪ್ರಯಾಣಿಕರಿಗೆ ತೀವ್ರ ಅನಾನುಕೂಲ ಉಂಟುಮಾಡಲಿದೆ.ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಮೂರು ವರ್ಷಗಳ ಅವಧಿಗೆ 12.43 ಕೋಟಿ ರೂಪಾಯಿಗಳ ಸಹಾಯಧನ ಪಾವತಿಸುವ ಒಪ್ಪಂದವನ್ನು ಸ್ಟಾರ್ ಏರ್ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾಗಿತ್ತು.

ಈ ಒಪ್ಪಂದ ನವೆಂಬರ್ 21 ಕ್ಕೆ ಮುಕ್ತಾಯವಾಗಲಿದ್ದು, ತದನಂತರ ಸಂಸ್ಥೆಯು ಸಾಮಾನ್ಯ ಮಾರುಕಟ್ಟೆ ದರದ ಆಧಾರದ ಮೇಲೆ ವಿಮಾನಯಾನ ಸೇವೆಯನ್ನು ಮುಂದುವರಿಸಲು ಮುಕ್ತ ಅವಕಾಶವಿದೆ.

ಆದರೆ, ಒಪ್ಪಂದ ಅಂತ್ಯಗೊಂಡ ನಂತರ ಸೇವೆಯನ್ನು ಮುಂದುವರಿಸುವ ಅಥವಾ ಸ್ಥಗಿತಗೊಳಿಸುವ ಕುರಿತು ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಈವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ರವಾನಿಸಿಲ್ಲ.

Author