ಬಾಕಿಯಿರುವ ಟ್ರಾಫಿಕ್ ಚಲನ್ ವಸೂಲಿಗೆ ವಿದ್ಯುತ್ ಬಿಲ್ ಲಿಂಕ್ ಮಾಡಿ : ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ

ದೇಶ

ನವದೆಹಲಿ,ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸುಪ್ರೀಕೋರ್ಟ್ ಮಹತ್ವದ ಸಲಹೆ ನೀಡಿದೆ. ಇ-ಚಲನ್‌ಗಳ ಮೂಲಕ ವಿಧಿಸಲಾಗಿರುವ ಸುಮಾರು ₹20,000 ಕೋಟಿ ದಂಡ ಇನ್ನೂ ವಸೂಲಿಯಾಗದೆ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ಬಾಕಿ ಇರುವ ಟ್ರಾಫಿಕ್ ದಂಡವನ್ನು ವಿದ್ಯುತ್ ಬಿಲ್‌ಗಳೊಂದಿಗೆ ಸಂಯೋಜಿಸುವ ಪರ್ಯಾಯ ಕ್ರಮದ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿಶಿಷ್ಟ ಸಲಹೆ ನೀಡಿದೆ.

ಸಂಚಾರ ನಿಯಮಗಳ ಪರಿಣಾಮಕಾರಿ ಜಾರಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪರ್ದೀವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠ, ಟ್ರಾಫಿಕ್ ನಿಯಮ ಉಲ್ಲಂಘನೆಯ ದಂಡ ಪಾವತಿಸದೆ ಬಾಕಿ ಉಳಿಸಿಕೊಳ್ಳುವವರಿಂದ ಹಣ ವಸೂಲಿ ಮಾಡಲು ಪರ್ಯಾಯ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು.

ಜನರು ಟ್ರಾಫಿಕ್ ಚಲನ್‌ನ ದಂಡವನ್ನು ಪಾವತಿಸದಿದ್ದರೆ, ಆ ಬಾಕಿ ಮೊತ್ತವನ್ನು ಅವರ ವಿದ್ಯುತ್ ಬಿಲ್‌ಗೆ ಸೇರಿಸುವ ಸಾಧ್ಯತೆಯನ್ನು ಪರಿಶೀಲಿಸಬಹುದು. ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಆತಂಕ ಇರುವುದರಿಂದ ಜನರು ಬಿಲ್ ಪಾವತಿಸುವ ಅನಿವಾರ್ಯತೆ ಎದುರಾಗುತ್ತದೆ. ಈ ದೇಶದಲ್ಲಿ ಇಂತಹ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ವಿಚಾರಣೆಯ ವೇಳೆ ಪೀಠ ಅಭಿಪ್ರಾಯಪಟ್ಟಿದೆ.

ದೇಶಾದ್ಯಂತ ಇ-ಚಲನ್‌ಗಳ ಮೂಲಕ ಒಟ್ಟು ಸುಮಾರು ₹45,000 ಕೋಟಿ ಮೌಲ್ಯದ ದಂಡ ವಿಧಿಸಲಾಗಿದೆ. ಈ ಪೈಕಿ ಇದುವರೆಗೆ ಸುಮಾರು ₹25,000 ಕೋಟಿ ಮಾತ್ರ ವಸೂಲಿಯಾಗಿದ್ದು, ಇನ್ನೂ ಸುಮಾರು ₹20,000 ಕೋಟಿ ದಂಡ ಪಾವತಿಯಾಗದೆ ಬಾಕಿ ಉಳಿದಿದೆ.

ವಿದ್ಯುತ್ ಬಿಲ್‌ಗೆ ಟ್ರಾಫಿಕ್ ದಂಡದ ಬಾಕಿಯನ್ನು ಸೇರಿಸುವ ವ್ಯವಸ್ಥೆ ಜಾರಿಗೆ ಬಂದರೆ, ವಾಹನ ಸವಾರರು ದಂಡವನ್ನು ದೀರ್ಘಕಾಲ ಬಾಕಿ ಉಳಿಸಿಕೊಳ್ಳುವುದಕ್ಕೆ ಕಡಿವಾಣ ಬೀಳಬಹುದು ಎಂಬ ಆಶಯ ಸುಪ್ರೀಂಕೋರ್ಟ್​.

Author