ಶಿವಮೊಗ್ಗ,ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹಣಕಾಸು ಇಲಾಖೆ ಪತ್ರ ಹೊರಡಿಸಿದ ಬೆನ್ನಲ್ಲೇ, ಬಿಜೆಪಿ ರಾಜ್ಯದಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಖಾಲಿ ಚೊಂಬು ಪ್ರದರ್ಶಿಸಿ, ಸರ್ಕಾರ ದಿವಾಳಿಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಇಂದು ಶಿವಮೊಗ್ಗದ ಗೋಪಿ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಲ್. ಜಗದೀಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು. ಸತ್ತೋಯ್ತಪ್ಪ ಸತ್ತೋಯ್ತು ಕಾಂಗ್ರೆಸ್ ಸರ್ಕಾರ ಸತ್ತೋಯ್ತು, ದಿವಾಳಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಿದರು.
ರಾಜ್ಯ ಸರ್ಕಾರ ಈಗಾಗಲೇ ದಿವಾಳಿಯಾಗಿದೆ. ಮೊನ್ನೆ ಮಂಗಳೂರಿಗೆ ತೆರಳಿ 32 ಸಾವಿರ ಕೋಟಿ ಅನುದಾನದ ಸುಳ್ಳು ಭರವಸೆ ನೀಡಿದ್ದಾರೆ. ಸರ್ಕಾರದ ಖಜಾನೆಯಲ್ಲಿ ಹಣವಿಲ್ಲದಿದ್ದರೂ ಉಚಿತ/ಉಚಿತ ಘೋಷಣೆಗಳಿಗೆ ಕೊರತೆಯಿಲ್ಲ ಎಂದು ಚೊಂಬನ್ನು ಪ್ರದರ್ಶಿಸಿ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪಿಸಿದರು. ಹಾಗೆಯೇ ಸಿಎಂ ಮತ್ತು ಡಿ. ಕೆ. ಶಿವಕುಮಾರ್ ಅವರ ಪ್ರತಿಕೃತಿಗೆ ಎಳ್ಳು-ನೀರು ಬಿಟ್ಟರು.





