ಬೆಂಗಳೂರು ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿಯವರ ನೇತೃತ್ವದ ಭಾರತ್ ಜೋಡೋ ಯಾತ್ರೆ-೨ ಸೆಪ್ಟೆಂಬರ್ ೩೦, ೨೦೨೨ರಂದು ಚಾಮರಾಜನಗರದ ಗುಂಡ್ಲುಪೇಟೆಗೆ ಪಾದಾರ್ಪಣೆ ಮಾಡಿದ ನೆನಪಿಗಾಗಿ ಶಿಕಾರಿಪುರದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಕೆಪಿಸಿಸಿ ರಾಜ್ಯ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಆರಂಭವಾಗಲಿದೆ.
ಕೆಪಿಸಿಸಿ ಕಾರ್ಯಾಲಯದಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಈ ವಿಷಯವನ್ನು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಇವರು ತಿಳಿಸಿದರು.ಭಾರತ್ ಜೋಡೋ ಯಾತ್ರೆಯ ಉದ್ದೇಶ ದೇಶದ ಜನರನ್ನು ಒಗ್ಗೂಡಿಸುವುದು, ಪರಸ್ಪರ ಸಹಬಾಳ್ವೆ ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಜನರಿಗೆ ತಲುಪಿಸುವುದಾಗಿದೆ. ಈ ಯಾತ್ರೆಯ ಮೂಲಕ ಜನರ ಸಮಸ್ಯೆಗಳನ್ನು ಆಲಿಸುವುದು ಮತ್ತು ಅವರ ಆಶಯಗಳಿಗೆ ಧ್ವನಿಯಾಗುವುದು ಪ್ರಮುಖ ಉದ್ದೇಶವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.
ಶಿಕಾರಿಪುರದಲ್ಲಿ ನಡೆಸಲು ಉದ್ದೇಶಿಸಿರುವ ಭಾರತ್ ಜೋಡೋ ಯಾತ್ರೆ-೨ ಸಂಬಂಧಪಟ್ಟಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಯೋಗೀಶ್ ಇವರೊಡನೆ ಚರ್ಚಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಮಧು ಬಂಗಾರಪ್ಪನವರು ಹಾಗೂ ಜಿಲ್ಲೆಯ ಮುಖಂಡರೊಂದಿಗೆ ಚರ್ಚಿಸಿ ದಿನಾಂಕವನ್ನು ತಿಳಿಸುವುದಾಗಿ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರು ತಿಳಿಸಿದರು.
ಈ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಯೋಗೇಶ್ ಕೆಪಿಸಿಸಿ ಉಪಾಧ್ಯಕ್ಷರಾದ ನಾರಾಯಣಸ್ವಾಮಿ, ಶಿಕಾರಿಪುರ ಗ್ಯಾರಂಟಿ ಸಮಿತಿ ಅನುಷ್ಠಾನ ಯೋಜನ ಅಧ್ಯಕ್ಷರಾದ ನಾಗರಾಜ್ ಗೌಡ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷರಾದ ಶಾಂತವೀರ ನಾಯಕ್,ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ರಮೇಶ್ ಶಂಕರಘಟ್ಟ, ಶಿವಮೊಗ್ಗ ಉತ್ತರ ಬ್ಲಾಕಿನ ಅಧ್ಯಕ್ಷರಾದ ಶಿವಕುಮಾರ್ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅನಿತಾ ಕುಮಾರಿ ಇದ್ದರು.





