“’ಮೋದಿಜೀ ರವರ 25 ವರ್ಷಗಳ ಸತತ ಸಾರ್ಥಕ ಜನಸೇವೆ, ದೀನ್‌ದಯಾಳ್ ಉಪಾಧ್ಯಾಯ್ ಹಾಗೂ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿ ಒಳಗೊಂಡ ಪಕ್ಷದ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ನಾಳೆಯಿಂದ ಚಾಲನೆ’ : ಸಂಸದ ರಾಘವೇಂದ್ರ

ಶಿವಮೊಗ್ಗ

ಶಿವಮೊಗ್ಗ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ವತಿಯಿಂದ ತಿಂಗಳ ಕಾಲ ನಡೆಯಲಿರುವ ಬೃಹತ್ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ನಾಳೆ ಚಾಲನೆ ನೀಡಲಾಗುತ್ತಿದ್ದು, ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಹಾಗೂ ಮಹಾತ್ಮ ಗಾಂಧಿ ಜಯಂತಿಗಳನ್ನು ಒಳಗೊಂಡಂತೆ ಈ ಅಭಿಯಾನದ ಮೂಲಕ ಪಕ್ಷ ಸೇವಾ ಕಾರ್ಯಗಳ ಮೂಲಕ ಪ್ರಧಾನಮಂತ್ರಿಗಳ ೨೫ ವರ್ಷಗಳ ದೇಶ ಸೇವೆಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಕಾಲ ನಿರಂತರ ಸೇವೆಯನ್ನು ಪೂರ್ಣಗೊಳಿಸುತ್ತಿರುವ ಭಾರತದ ಏಕೈಕ ಹಾಗೂ ಚಾರಿತ್ರಿಕ ನಾಯಕ ನರೇಂದ್ರ ಮೋದಿಜಿ, ಅವರ ಜನ್ಮದಿನದ ಸಂಭ್ರಮವನ್ನು ಅರ್ಥಪೂರ್ಣವಾಗಿ, ಜನಸೇವಾ ಚಳುವಳಿಯನ್ನಾಗಿ ಆಚರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶ್ರೀ ನಿತಿನ್ ನಬಿನ್ ಕರೆ ಕೊಟ್ಟಿರುವುದಾಗಿ ತಿಳಿಸಿದರು.ಅಕ್ಟೋಬರ್ 7, 2001 ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೋದಿ ಜೀ, 13 ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಆಗಿ ಹಾಗೂ ನಂತರ, ಕಳೆದ 12 ವರ್ಷಗಳಿಂದ ದೇಶದ ಪ್ರಧಾನ ಸೇವಕರಾಗಿ ಮಾದರಿ ಆಡಳಿತ ನೀಡಿದ್ದಾರೆ.

ಚುನಾಯಿತ ಪ್ರಧಾನಿಯಾಗಿ ಸತತ 4,497 ದಿನಗಳ ಸುದೀರ್ಘ ಸೇವೆ ಸಲ್ಲಿಸುವ ಮೂಲಕ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು (4,397 ದಿನಗಳು) ದಾಟಿ ಹೊಸ ಇತಿಹಾಸ ಬರೆದಿದ್ದಾರೆ. ಕಳೆದ 12 ವರ್ಷಗಳಲ್ಲಿ 25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 80 ಕೋಟಿ ಜನರಿಗೆ ಉಚಿತ ಪಡಿತರ, 12 ಕೋಟಿ ಶೌಚಾಲಯ ಹಾಗೂ 4 ಕೋಟಿಗೂ ಹೆಚ್ಚು ಬಡವರಿಗೆ ಉಚಿತ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ದೇಶದ ಆರ್ಥಿಕತೆಯನ್ನು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುವ ಶಕ್ತಿಯಾಗಿ ರೂಪಿಸಿದ್ದಾರೆ ಎಂದು ಸಂಸದ ರಾಘವೇಂದ್ರ ಹೇಳಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್ ನಬಿನ್ ಜೀ ಅವರ ಕರೆಯಂತೆ, ಮೋದಿಜೀಯವರ ಜನ್ಮದಿನವನ್ನು ‘ಸೇವಾ ದಿವಸ’ವಾಗಿ ಆಚರಿಸಲಾಗುತ್ತಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17 ರವರೆಗೆ ವಿವಿಧ ಜನಪರ ಕಾರ್ಯಕ್ರಮಗಳನ್ನು ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ವಿವರಗಳನ್ನು ಸಂಸದರು ಹಂಚಿಕೊಂಡರು.

ಸೆಪ್ಟೆಂಬರ್ 17 (ಪ್ರಧಾನಿಗಳ ಜನ್ಮದಿನ) ಆಶೀರ್ವಾದದ ದೀಪ:

ಕ್ಷೇತ್ರದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಸಂಜೆ ಪ್ರತಿಯೊಬ್ಬ ಕಾರ್ಯಕರ್ತರು ಮತ್ತು ನಾಗರಿಕರು ತಮ್ಮ ಮನೆಗಳ ಮುಂದೆ ‘ಆಶೀರ್ವಾದದ ದೀಪ’ ಬೆಳಗುವುದು. ನಂತರ ಆ ಚಿತ್ರಗಳನ್ನು #AashirwadForModi ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು.

ಸೆಪ್ಟೆಂಬರ್ 18 – 24 (ನಮೋ ಸೇವಾ ಗಾಥಾ):

ಮಹಿಳಾ ಮೋರ್ಚಾದಿಂದ ಸ್ವಚ್ಛತಾ ಅಭಿಯಾನ, SC/ST ಮೋರ್ಚಾದಿಂದ ರಕ್ತದಾನ ಶಿಬಿರ, ರೈತ ಹಾಗೂ OBC ಮೋರ್ಚಾದಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ನಾಗರಿಕ ಸೇವಾ ಕಾರ್ಯಾಗಾರಗಳು, ಯುವಮೋರ್ಚಾದಿಂದ ಸೈಕಲ್ ಜಾಥಾ ಹಾಗೂ ಸಾಂಸ್ಕೃತಿಕ ಪ್ರಕೋಷ್ಠದಿಂದ ಬೀದಿ ನಾಟಕ ಪ್ರದರ್ಶನ.

ಸೆಪ್ಟೆಂಬರ್ 25 – ಅಕ್ಟೋಬರ್ 6 (ದೀನ್‌ದಯಾಳ್ ಜಯಂತಿ ಹಾಗೂ ಸಂಪರ್ಕ):

ಸೆಪ್ಟೆಂಬರ್ 25 ರಂದು ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಜಯಂತಿ ಆಚರಣೆ ಮತ್ತು ಅಂತ್ಯೋದಯ ಉಪನ್ಯಾಸ, ಸೆಪ್ಟೆಂಬರ್ 27 ರಂದು ಬೂತ್‌ಗಳಲ್ಲಿ ‘ಮನ್ ಕೀ ಬಾತ್’ ವೀಕ್ಷಣೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ ಮತ್ತು ಉಚಿತ ಉಪಕರಣ ವಿತರಣೆ.

ಅಕ್ಟೋಬರ್ 2 – 14 (ಗಾಂಧಿ ಜಯಂತಿ ಹಾಗೂ ಸ್ವದೇಶಿ ಸಂತೆ):

ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ‘Local for Vocal’ ಉತ್ತೇಜನಕ್ಕೆ ಖಾದಿ ಪ್ರದರ್ಶನ ಮತ್ತು “ಸ್ವದೇಶಿ ಸಂತೆ”, ಅಕ್ಟೋಬರ್ 7 ರಿಂದ 14 ರವರೆಗೆ ಶಾಲಾ ಮಕ್ಕಳಿಗೆ ಚಿತ್ರಕಲಾ ಮತ್ತು ಭಾಷಣ ಸ್ಪರ್ಧೆಗಳು.

ಅಕ್ಟೋಬರ್ 17 (ಮಹಾಸಮಾರೋಪ):*

ಬೃಹತ್ ಮಾನವ ರಂಗೋಲಿ ಮತ್ತು ಸೇವಾ ಜ್ಯೋತಿ ಬೆಳಗಿಸುವ ಮೂಲಕ ಒಂದು ತಿಂಗಳ ಸುದೀರ್ಘ ಅಭಿಯಾನಕ್ಕೆ ಅಧಿಕೃತ ತೆರೆ ಬೀಳಲಿದೆ. ಇತಿಹಾಸದಲ್ಲಿ ಕೆಲವರು ಅಧಿಕಾರಕ್ಕಾಗಿ ಆಡಳಿತ ನಡೆಸಿದರೆ, ಪ್ರಧಾನಿ ನರೇಂದ್ರ ಮೋದಿಜೀಯವರು 140 ಕೋಟಿ ಭಾರತೀಯರ ಸೇವೆಯನ್ನೇ ತಮ್ಮ ಧರ್ಮವನ್ನಾಗಿ ಮಾಡಿಕೊಂಡಿದ್ದಾರೆ.

ಶಿವಮೊಗ್ಗ ಕ್ಷೇತ್ರದ ಸಮಸ್ತ ನಾಗರಿಕರು, ಯುವಜನತೆ ಹಾಗೂ ತಾಯಂದಿರು ಈ ‘ಸೇವಾ ಸಂಕಲ್ಪ ಅಭಿಯಾನ’ದಲ್ಲಿ ರಕ್ತದಾನ, ಸ್ವಚ್ಛತೆ ಹಾಗೂ ದೀಪ ಬೆಳಗಿಸುವ ಮೂಲಕ ಸಕ್ರಿಯವಾಗಿ ಭಾಗವಹಿಸಿ ಈ ಸೇವಾ ಯಜ್ಞವನ್ನು ಯಶಸ್ವಿಗೊಳಿಸಬೇಕಾಗಿ ಸಂಸದ ಬಿ.ವೈ.ರಾಘವೇಂದ್ರ ಕೋರಿದ್ದಾರೆ.

Author